ಪಾಟ್ನಾ:ಬಿಹಾರಿಗಳನ್ನು ಕೊಲ್ಲಲಾಗುತ್ತಿದೆ ಎಂಬ ವೈರಲ್ ವಿಡಿಯೋ ಪ್ರಕರಣವೂ ತಮಿಳುನಾಡಿನಲ್ಲಿ ಭಾರಿ ಸದ್ದು ಮಾಡಿತ್ತು. ರಾಜಕೀಯ ಪ್ರಮುಖ ಪಕ್ಷಗಳು ಸರ್ಕಾರದ ವಿರುದ್ಧ ಆರೋಪದ ಚಾಟಿ ಬೀಸಿ,ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ತಮಿಳುನಾಡಿನಲ್ಲಿ ಸಾವಿಗೀಡಾದ ಬಿಹಾರಿ ಜನರು ಅಪಘಾತದಲ್ಲಿ ಬಲಿಯಾಗಿದ್ದರು. ಅವರ ಸಾವಿಗೆ ಕಾರಣ ತಮಿಳರು ಅಲ್ಲ. ಎರಡೂ ರಾಜ್ಯಗಳ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಇಡೀ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದ್ದು, ನಕಲಿ ವಿಡಿಯೋ ಚಿತ್ರೀಕರಿಸಿದ ಪ್ರಮುಖ ಆರೋಪಿ ಸೇರಿ ಒಟ್ಟು ಮೂವರನ್ನು ಬಂಧಿಸಲಾಗಿದೆ.
ಎರಡು ರಾಜ್ಯ ಪೊಲೀಸರ ಜಂಟಿ ತನಿಖೆ:ವೈರಲ್ ವಿಡಿಯೋ ಪ್ರಕರಣದ ತನಿಖೆಗಾಗಿ ತಮಿಳುನಾಡಿನ ಪೊಲೀಸರ ತಂಡ ಬಿಹಾರಕ್ಕೆ ಆಗಮಿಸಿತು. ಇಒಯು ಹಾಗೂ ಬಿಹಾರ ಪೊಲೀಸರು ಆರೋಪಿಗಳಾದ ಅಮನ್ ಕುಮಾರ್, ಮನೀಶ್ ಕಶ್ಯಪ್, ರಾಕೇಶ್ ರಂಜನ್ ಕುಮಾರ್ ಮತ್ತು ಯುವರಾಜ್ ಸಿಂಗ್ ರಜಪೂತ್ ಸೇರಿದಂತೆ ನಾಲ್ವರನ್ನು ಗುರುತಿಸಿದ್ದಾರೆ. ಆದರೆ, ಆರೋಪಿ ಮನೀಶ್ ಕಶ್ಯಪ್ ಮತ್ತು ಯುವರಾಜ್ ಸಿಂಗ್ ರಜಪೂತ್ ಅವರ ಬಂಧನ ಇನ್ನೂ ಆಗಿಲ್ಲ. ಇಬ್ಬರ ವಿರುದ್ಧವೂ ಬಂಧನ ವಾರಂಟ್ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
42 ಬಳಕೆದಾರರಿಗೆ ನೋಟಿಸ್: ಬಿಹಾರ ಪೊಲೀಸರ ಮಾಹಿತಿ ಪ್ರಕಾರ, ಪೊಲೀಸರು ಈಗಾಗಲೇ ಜಮುಯಿದ ಅಮನ್ ಕುಮಾರ್ ಮತ್ತು ಗೋಪಾಲಗಂಜ್ ನಗರದ ರಾಕೇಶ್ ರಂಜನ್ಕುಮಾರ್ ಅವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಉಮೇಶ್ ಮಹತೋ ಎಂಬಾತನನ್ನು ಗೋಪಾಲ್‌ಗಂಜ್‌ನಲ್ಲಿ ಬಂಧಿಸಿದ್ದು, ಆತನ ವಿಚಾರಣೆ ನಡೆಯುತ್ತಿದೆ. ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ 42 ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ವೈರಲ್ ವಿಡಿಯೋ ಒಪ್ಪಿಕೊಂಡ ಆರೋಪಿ: ಗೋಪಾಲಗಂಜ್ದಲ್ಲಿ ಬಂಧಿತ ಆರೋಪಿ ರಾಕೇಶ್ ರಂಜನ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇಬ್ಬರ ನೆರವಿನಿಂದ ನಕಲಿ ವಿಡಿಯೋ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ವಿಡಿಯೋವನ್ನು ಜಕ್ಕನ್‌ಪುರದ ಬೆಂಗಾಲಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾನೆ. ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 468, 471, 153, 153ಎ, 153ಬಿ, 505 1ಬಿ, 505 1ಬಿ, 120ಬಿ ಮತ್ತು 67 ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ 10 ಸದಸ್ಯರ ತಂಡ: ವೈರಲ್ ವಿಡಿಯೋ ಪ್ರಕರಣ ತನಿಖೆ ನಡೆಸಲು 10 ಸದಸ್ಯರ ತಂಡ ರಚಿಸಲಾಗಿದೆ, ಈ ತನಿಖೆಯಲ್ಲಿ ಇದು ವರೆಗೆ 30 ದಾರಿತಪ್ಪಿಸುವ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ಗುರುತಿಸಲಾಗಿದೆ. 26 ಟ್ವೀಟ್‌ಗಳು ಮತ್ತು ಫೇಸ್‌ಬುಕ್ ಖಾತೆಗಳನ್ನು ಸಹ ಪತ್ತೆ ಹಚ್ಚಲಾಗಿದೆ. ತಮಿಳುನಾಡು ಪೊಲೀಸರು ಇದುವರೆಗೆ 13 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.