ಚೆನ್ನೈ (ತಮಿಳುನಾಡು):ಬಿಹಾರದ ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋಗಳು ಸುಳ್ಳು ಮತ್ತು ವಿಡಿಯೋಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಡಿಜಿಪಿ ಶೈಲೇಂದ್ರ ಬಾಬು ಗುರುವಾರ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆಯ ನಡೆಯುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಪಿ ಶೈಲೇಂದ್ರ ಬಾಬು,"ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಳು ಮತ್ತು ಕಿಡಿಗೇಡಿತನದ ವಿಡಿಯೋಗಳನ್ನು ಬಿಹಾರದಲ್ಲಿ ಪೋಸ್ಟ್ ಮಾಡಿದ್ದಾರೆ. ಇಬ್ಬರು ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸುಳ್ಳು ಮತ್ತು ಈ ಘಟನೆಗಳು ಬಹಳ ಹಿಂದೆ ನಡೆದಿವೆ. ವಿಡಿಯೋದಲ್ಲಿರುವಂತೆ ಸ್ಥಳೀಯರು ಮತ್ತು ಕಾರ್ಮಿಕರ ನಡುವೆ ಯಾವುದೇ ಘರ್ಷಣೆಯೂ ನಡೆದಿಲ್ಲ’’ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಎಲ್ಲವನ್ನೂ ತಿರುಚಿ ಬಿಹಾರದ ಕಾರ್ಮಿಕರ ಮೇಲೆ ದಾಳಿ ಮಾಡಿದಂತೆ ತೋರಿಸಲಾಗಿದೆ. ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದರು. ಇದುವರೆಗೆ, ತಮಿಳುನಾಡಿನಲ್ಲಿ ಸ್ಥಳೀಯರು ಮತ್ತು ವಲಸೆ ಕಾರ್ಮಿಕರ ನಡುವೆ ಗುಂಪು ಘರ್ಷಣೆ ಉಂಟಾಗಿದೆ ಎಂದು ಎರಡು ಘಟನೆಗಳು ವರದಿ ಆಗಿದೆ. ಜನವರಿ 14 ರಂದು ತಿರುಪ್ಪೂರದ ಗಾರ್ಮೆಂಟ್ ಫ್ಯಾಕ್ಟರಿ ಸ್ಥಳೀಯರು ಮತ್ತು ವಲಸೆ ಕಾರ್ಮಿಕರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಸಣ್ಣ ವಿಷಯಕ್ಕೆ ಆರಂಭವಾದ ಜಗಳ ನಂತರ ತೀವ್ರ ವಿಕೋಪಕ್ಕೆ ತೆರಳಿ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದಿತ್ತು.