ಚೆನ್ನೈ (ತಮಿಳುನಾಡು) :ಸನಾತನ ಧರ್ಮ ನಿರ್ಮೂಲನೆಗೆ ಕರೆ ನೀಡಿದ್ದ ಪುತ್ರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಬೆಂಬಲಿಸಿದ್ದಾರೆ. ಜೊತೆಗೆ ಆ ಮಾತನ್ನು ಅರ್ಥ ಮಾಡಿಕೊಳ್ಳದೇ ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಸನಾತನ ಸಂಸ್ಥೆಯು ಬೋಧಿಸಿದ ಅಮಾನವೀಯ ತತ್ವಗಳ ಬಗ್ಗೆ ಉದಯನಿಧಿ ಮಾತನಾಡಿದ್ದಾರೆ. ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವರು ಅವಮಾನಿಸಿಲ್ಲ. ಪರಿಶಿಷ್ಟ ಜಾತಿ, ಪಂಗಡ ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಸನಾತನ ಧರ್ಮದ ತತ್ವಗಳ ಬಗ್ಗೆ ಅವರು ತಮ್ಮ ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಸ್ಟಾಲಿನ್ ಹೇಳಿದ್ದಾರೆ.
ವಿವಾದಿತ ಹೇಳಿಕೆಯೇನು?:ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ, ಕೊರೊನಾ ಇದ್ದ ಹಾಗೆ. ಅದನ್ನು ತಡೆಯುವ ಬದಲು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದು ದೇಶಾದ್ಯಂತ ವಿವಾದ ಕಿಡಿ ಹೊತ್ತಿಸಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ಮತ್ತು ಅದರ ಮಿತ್ರ ವಿಪಕ್ಷಗಳು ಮಾಡಿಕೊಂಡಿರುವ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಹಿಂದುಗಳ ನರಮೇಧಕ್ಕೆ ಕರೆ ನೀಡಿದೆ ಎಂದು ಆರೋಪಿಸಿತ್ತು.