ನವದೆಹಲಿ :ಮಸೂದೆಗಳಿಗೆ ಅನುಮೋದನೆ ನೀಡುವ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ರಾಜ್ಯಪಾಲ ಆರ್ ಎನ್ ರವಿ ನಡುವಿನ ಸಂಘರ್ಷ ಮುಂದುವರೆದಿದೆ. ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ಗವರ್ನರ್ ರವಿ ಅವರು ವಿಳಂಬ ಮಾಡುತ್ತಿರುವುದಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈಗಾಗಲೇ ಮಸೂದೆಗಳು ರಾಷ್ಟ್ರಪತಿಗಳ ಕೈ ಸೇರಿದ್ದರೆ, ತಡೆಯಾಜ್ಞೆ ನೀಡಲು ಆಗುವುದಿಲ್ಲ ಎಂದು ಹೇಳಿದೆ. ಈ ಹಿಂದೆ ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅಭಿವೃದ್ಧಿ ಮಸೂದೆಗಳ ಬಗೆಗಿನ ರಾಜ್ಯಪಾಲರ ನಡೆಯನ್ನು ಟೀಕಿಸಿತ್ತು.
ವಿಧಾನಸಭೆಯಲ್ಲಿ ಮಸೂದೆಗಳಿಗೆ ಅನುಮೋದನೆ ನೀಡುವ ವಿಚಾರದಲ್ಲಿ ರಾಜ್ಯಪಾಲ ಆರ್ಎನ್ ರವಿ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಜೆ. ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಆಡಳಿತ, ವ್ಯವಹಾರ ಸರಾಗವಾಗಿ ನಡೆಯುವಂತೆ ಮಾಡುವುದು ಸರ್ಕಾರದ ಕೆಲಸ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು, ಪಶ್ಚಿಮ ಬಂಗಾಳದ ಪ್ರಕರಣವನ್ನು ಉಲ್ಲೇಖಿಸಿ, ನಾನು ರಾಜ್ಯಪಾಲರಲ್ಲಿ ಮಾತನಾಡಿದ್ದೆ. ಬಳಿಕ ಅವರು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದರು. ಎರಡು ವಾರ ಅವರು ವಿವಿಧ ಚರ್ಚೆ ನಡೆಸಿದ್ದಾರೆ. ಈಗ ಸರ್ಕಾರದ ವ್ಯವಹಾರಗಳು ಸುಗಮವಾಗಿ ಸಾಗುತ್ತಿದೆ ಎಂದು ಹೇಳಿದರು.