ಚೆನ್ನೈ :ಆರಂಭದಿಂದಲೂ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ಬಿಜೆಪಿ ನಾಯಕರು ರಾಜ್ಯದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಮೇಕೆಡಾಟು ಯೋಜನೆ ಮುಂದುವರಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಘಟಕ ಪ್ರತಿಭಟಿಸುವುದಾಗಿ ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ, ರಾಜಕಾರಣಿ ಕೆ ಅಣ್ಣಾಮಲೈ ನಿನ್ನೆ ಅಂತರ್ ರಾಜ್ಯ ಸಮಸ್ಯೆಗಳ ಬಗ್ಗೆ ಮಾತನಾಡುವಾಗ, ತಮಿಳುನಾಡಿನ ಬಿಜೆಪಿ ಘಟಕವು ಕೇಂದ್ರ ಬಿಜೆಪಿ ಮತ್ತು ನೆರೆಯ ಕರ್ನಾಟಕ ಬಿಜೆಪಿಯನ್ನು ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಪ್ರಾರಂಭಿಸಲು ಕರ್ನಾಟಕ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಆಗಸ್ಟ್ 5ರಂದು ಕಾವೇರಿ ಪ್ರದೇಶದಲ್ಲಿ ಒಂದು ದಿನದ ಉಪವಾಸ ಪ್ರತಿಭಟನೆ ನಡೆಸಲು ಯೋಜಿಸಿದೆ. ಪ್ರತಿಭಟನೆಯಲ್ಲಿ 10,000ಕ್ಕೂ ಹೆಚ್ಚು ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ ಎಂದಿದ್ದಾರೆ.
ಸ್ಥಳೀಯ ವಿಷಯಗಳ ಬಗ್ಗೆ ಗಮನ ಹರಿಸುವಂತೆ ರಾಜ್ಯದ ಎಲ್ಲಾ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮುಂಬರುವ ಸ್ಥಳೀಯ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಅಣ್ಣಾಮಲೈ ಈ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಕಾನೂನು ನಿಯಮಗಳ ಪ್ರಕಾರ ಕರ್ನಾಟಕ ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ. ಕೇಂದ್ರ ಜಲಸಂಪನ್ಮೂಲ ಸಚಿವರು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಸಂದೇಶವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯಬೇಕು ಎಂದು ಅಣ್ಣಾಮಲೈ ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಕೆ.ಅಣ್ಣಾಮಲೈ ಐಪಿಎಸ್ ಅಧಿಕಾರಿಯಾಗಿದ್ದ ವೇಳೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.