ಚೆನ್ನೈ(ತಮಿಳುನಾಡು): ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ದರ ಕಡಿತ ಮಾಡದ ತಮಿಳುನಾಡು ಸರ್ಕಾರದ ನೀತಿ ಖಂಡಿಸಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ತೈಲದ ಮೇಲೆ ಕೇಂದ್ರ ಸರ್ಕಾರ ಕಳೆದ ಕೆಲ ದಿನಗಳ ಹಿಂದೆ ಸುಂಕ ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ಕೆಲವೊಂದು ರಾಜ್ಯಗಳು ಸಹ ಪೆಟ್ರೋಲ್ ಬೆಲೆ ಕಡಿತಗೊಳಿಸಿವೆ. ಆದರೆ, ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಡಿಎಂಕೆ ನೇತೃತ್ವದ ಸ್ಟಾಲಿನ್ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಎಗ್ಮೋರ್ ರಾಜರತ್ನಂ ಕ್ರೀಡಾಂಗಣದ ಬಳಿ ನಿನ್ನೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಪ್ರತಿಭಟನೆ ನಡೆಸಲು ಬಿಜೆಪಿಗೆ ಅನುಮತಿ ನೀಡಿರಲಿಲ್ಲ. ಇದರ ಹೊರತಾಗಿ ಕೂಡ ಅಣ್ಣಾಮಲೈ, ಎಚ್ ರಾಜಾ ಸೇರಿದಂತೆ ಐದು ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.