ಚೆನ್ನೈ (ತಮಿಳುನಾಡು):ತಮಿಳುನಾಡಿನಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಉಂಟಾಗಿದೆ. ರಾಜ್ಯ ಘಟಕದ ಐಟಿ ಸೆಲ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಬಿಜೆಪಿಯನ್ನು ತ್ಯಜಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಕ್ಕೆ ಭಾನುವಾರ ಸೇರ್ಪಡೆಗೊಂಡಿದ್ದಾರೆ.
ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ ಸಮ್ಮುಖದಲ್ಲಿ ಪಕ್ಷಕ್ಕೆ ನಿರ್ಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ. ನಿರ್ಮಲ್ ಕುಮಾರ್ ಅವರಿಗೆ ಹೂಗುಚ್ಛ ನೀಡಿ ಪಳನಿಸ್ವಾಮಿ ಸ್ವಾಗತಿಸಿದ್ದಾರೆ. 2021ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಮ್ಮುಖದಲ್ಲಿ ನಿರ್ಮಲ್ ಕುಮಾರ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅಲ್ಪಾವಧಿಯಲ್ಲಿಯೇ ರಾಜ್ಯದ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರ ನಡುವೆ ಕಳೆದ ಒಂದು ವರ್ಷದಿಂದ ನಿರ್ಮಲ್ ಕುಮಾರ್ ಮತ್ತು ಅಣ್ಣಾಮಲೈ ನಡುವೆ ಉತ್ತಮ ಸಂಬಂಧವಿಲ್ಲ ಹೇಳಲಾಗುತ್ತಿತ್ತು. ಇದೀಗ ಬಿಜೆಪಿ ತೊರೆಯುವ ಕುರಿತು ಅಣ್ಣಾಮಲೈ ವಿರುದ್ಧ ನಿರ್ಮಲ್ ಕುಮಾರ್ ಬಹಿರಂಗವಾಗಿ ನಾನಾ ಆರೋಪಗಳನ್ನು ಮಾಡಿದ್ದಾರೆ.
ಇದನ್ನೂ ಓದಿ:ಸುಳ್ಳು ಸುದ್ದಿ ಹಬ್ಬಿಸಿದವರು ದೇಶ ವಿರೋಧಿಗಳು ಎಂದ ಸ್ಟಾಲಿನ್: ಪತ್ರಿಕೆ ಸಂಪಾದಕ ಸೇರಿ ಮೂವರ ವಿರುದ್ಧ ಕೇಸ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಿರ್ಮಲ್ ಕುಮಾರ್, ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಸಮಸ್ಯೆಗಳು ಹಾಗೂ ಮುಜುಗರಗಳನ್ನು ಎದುರಿಸುತ್ತಿದ್ದರೂ ನಾನು ಪಕ್ಷದೊಂದಿಗೆ ಪ್ರಯಾಣಿಸಿದ್ದೇನೆ. ಪ್ರಾಮಾಣಿಕವಾಗಿ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡಿದರೂ ದುಃಖ ಮಾತ್ರ ಉಳಿದಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ''ವಿದಾಯ" ಎಂದು ಹೇಳುವ ಮೂಲಕ ತಮ್ಮ ಸಂದೇಶವನ್ನು ಕೊನೆಗೊಳಿಸಿದ್ದಾರೆ.