ಚೆನ್ನೈ (ತಮಿಳುನಾಡು):ಹಣೆಬರಹ ಗಟ್ಟಿಯಾಗಿದ್ದರೆ ಯಮ ಕೂಡ ಏನೂ ಮಾಡಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 1991 ರಲ್ಲಿ ಸಿನಿಮಾದ ಚಿತ್ರೀಕರಣದ ವೇಳೆ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ತಮಿಳುನಾಡಿನ ನಟ, ನಿರ್ದೇಶಕರೊಬ್ಬರು 32 ವರ್ಷಗಳ ಬಳಿಕ ಇಂದು (ಮಂಗಳವಾರ) ವಿಧಿವಶರಾಗಿದ್ದಾರೆ.
ಹೌದು, ಮೂರು ದಶಕಗಳ ಕಾಲ ಹಾಸಿಗೆ ಹಿಡಿದಿದ್ದ ಹಿರಿಯ ನಟ ಬಾಬು ಸೆ.19 ರಂದು ಸಾವನ್ನಪ್ಪಿದ್ದಾರೆ. ಸಿನಿಮಾವೊಂದರ ಸಾಹಸ ದೃಶ್ಯದ ವೇಳೆ ನೈಜ ನಟನೆ ಮಾಡಲು ಹೋಗಿ ಕಟ್ಟಡದಿಂದ ಜಿಗಿದಾಗ ಬೆನ್ನುಮೂಳೆ ಮುರಿದು ಪಾರ್ಶ್ವವಾಯು ತಗುಲಿತ್ತು. ಬಳಿಕ ಕೋಮಾಕ್ಕೆ ಜಾರಿದ್ದರು. ಇದಾದ ಬಳಿಕ ಅವರು ಮೇಲೇಳಲೇ ಇಲ್ಲ. ಅಂದಿನಿಂದ ಹಾಸಿಗೆ ಹಿಡಿದಿದ್ದ ಅವರು, ಈಗ ಸಿನಿಮಾವಲ್ಲದೇ ಲೋಕವನ್ನೇ ತ್ಯಜಿಸಿದ್ದಾರೆ.
ಯಾರು ಈ ಬಾಬು:1990 ರ ದಶಕದಲ್ಲಿ ಖ್ಯಾತಿಯನ್ನು ಗಳಿಸಿದ ನಟ ಬಾಬು, ಹೆಸರಾಂತ ನಿರ್ದೇಶಕ ಭಾರತಿರಾಜರ ಬಳಿ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. 1990 ರಲ್ಲಿ ಭಾರತಿರಾಜ ಅವರ 'ಎನ್ ಉಯಿರ್ ತೋಝನ್' (1990) ಚಿತ್ರದಲ್ಲಿ ನಾಯಕನಾಗಿ ನಟಿಸಿ ಖ್ಯಾತ ಪಡೆದರು. ಈ ಚಿತ್ರದ ಹಾಡಾದ ಸಂಗೀತ ಮಾಂತ್ರಿಕ ಇಳಯರಾಜ ಅವರು ಸಂಯೋಜಿಸಿದ "ಕುಯಿಲು ಕುಪ್ಪಂ ಕುಯಿಲು ಕುಪ್ಪಂ ಗೋಪುರಂ ಆನಾಥೆನ್ನ" ಹಾಡು ಮನೆ, ಬಾರ್ ರೆಸ್ಟೋರೆಂಟ್ಗಳಲ್ಲಿ ಇಂದಿಗೂ ಅನುರಣಿಸುತ್ತದೆ.
ಸಿನಿಮಾದ ಯಶಸ್ಸಿನ ನಂತರ ಬಾಬು ಅವರು, 'ಪೆರುಮ್ ಪುಲ್ಲಿ (1991),' 'ತಾಯಮ್ಮ (1991),' ಮತ್ತು 'ಪೊನ್ನುಕು ಸೇತಿ ವಂಥಾಚು (1991)' ನಂತಹ ಗ್ರಾಮೀಣ ಸೊಗಡಿನ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕಾಲಿವುಡ್‌ನಲ್ಲಿ ಭರವಸೆಯ ನಟರಾಗಿ ದಾಪುಗಾಲು ಹಾಕುತ್ತಿರುವಾಗ, 'ಮನಸಾರ ಪರ್ಹಿತಾಂಗಳೆನ್' ಚಿತ್ರದಲ್ಲಿ ನಟಿಸುತ್ತಿರುವಾಗ ಜೀವನದ ದಿಕ್ಕನ್ನೇ ಬದಲಿಸಿತು.
ಕುತ್ತು ತಂದ ಸಾಹಸ ನಟನೆ:1991 ರಲ್ಲಿ ಮನಸಾರ ಪರ್ಹಿತಾಂಗಳೆನ್ ಚಿತ್ರದ ಚಿತ್ರೀಕರಣದ ವೇಳೆ ನಡೆಯಬಾರದ ಘಟನೆ ನಡೆದಿತ್ತು. ಸಾಹಸ ಚಿತ್ರೀಕರಣ ನಡೆಸುತ್ತಿರುವಾಗ ಯಾವುದೇ ಡೂಪ್ ಹಾಕದೇ, ನೈಜವಾಗಿ ದೃಶ್ಯ ತೆಗೆಯಲು ನಿರ್ದೇಶಕರು ಬಯಸಿದ್ದರು. ಅದಕ್ಕಾಗಿ ನಾಯಕನು ಮಹಡಿಯಿಂದ ಜಿಗಿಯಬೇಕಿತ್ತು. ಇದನ್ನು ಒಪ್ಪಿಕೊಂಡ ಬಾಬು ಅವರ ಅಪಾಯವನ್ನು ಅರಿಯದೇ ಸಾಹಸ ದೃಶ್ಯಕ್ಕಾಗಿ ಮಹಡಿಯಿಂದ ಜಿಗಿಯಲು ನಿರ್ಧರಿಸಿದರು.
ದುರಂತವೆಂದರೆ, ಜಿಗಿತದ ಸಮಯದಲ್ಲಿ ಅವರು ತೀವ್ರವಾದ ಬೆನ್ನಿನ ಗಾಯಕ್ಕೆ ತುತ್ತಾದರು. ಇದರಿಂದ ಅವರಿಗೆ ಪಾರ್ಶ್ವವಾಯು ತಗುಲಿತು. ಅದರಿಂದ ಅವರು ಗುಣಮುಖರಾಗದೇ 32 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಹಲವಾರು ವೈದ್ಯಕೀಯ ಚಿಕಿತ್ಸೆಗಳ ಹೊರತಾಗಿಯೂ, ಅವರ ಸ್ಥಿತಿ ಸುಧಾರಿಸಲಿಲ್ಲ. ಬಳಿಕ ಅವರು ಕೋಮಾಕ್ಕೂ ಜಾರಿದ್ದರು. ಇಂದು ಅವರು ಇಹಲೋಕ ತ್ಯಜಿಸಿದರು.
ಇದನ್ನೂ ಓದಿ:Modi whatsapp channels; ವಾಟ್ಸಾಪ್ ಚಾನಲ್ಸ್ ಖಾತೆ ಆರಂಭಿಸಿದ ಪ್ರಧಾನಿ ಮೋದಿ.. ಪಿಎಂ ಕಚೇರಿಯಲ್ಲಿ ಕುಳಿತ ಫೋಟೋ ಶೇರ್