ನವದೆಹಲಿ: ಪ್ರತಿಭಟನಾನಿರತ ರೈತರ ಪ್ರತಿನಿಧಿಗಳೊಂದಿಗೆ ಇಂದು ನಡೆದ ಸಭೆ ಉತ್ತಮವಾಗಿದ್ದು, ಮುಂದಿನ ಸುತ್ತಿನ ಮಾತುಕತೆ ಡಿಸೆಂಬರ್ 3ರಂದು ನಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗಾಗಿ ರೈತರ ಸಣ್ಣ ಗುಂಪನ್ನು ರಚಿಸಬೇಕೆಂದು ನಾವು ಬಯಸಿದ್ದೆವು. ಆದರೆ ರೈತ ಮುಖಂಡರು ಎಲ್ಲರೂ ಕೂಡ ಪಾಲ್ಗೊಳ್ಳಬೇಕೆಂದು ಹೇಳುತ್ತಿದ್ದು, ಅವರ ನಿರ್ಧಾರ ನಮಗೆ ಸಮಸ್ಯೆಯಾಗುವುದಿಲ್ಲ ಎಂದು ನರೇಂದ್ರಸಿಂಗ್ ತೋಮರ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರವು ಈ ಮೊದಲು ತಮ್ಮ ಸಂಘಟನೆಗಳಿಂದ ನಾಲ್ಕರಿಂದ ಐದು ಜನರ ಹೆಸರನ್ನು ನೀಡುವಂತೆ ಮತ್ತು ಸಮಿತಿ ರಚಿಸುವಂತೆ ಕೇಳಿಕೊಂಡಿದ್ದು, ಹೊಸ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಕೃಷಿ ತಜ್ಞರಲ್ಲದೆ ಸರ್ಕಾರದ ಪ್ರತಿನಿಧಿಗಳೂ ಇರುತ್ತಾರೆ ಎಂದಿದೆ.
ಸಭೆಯಲ್ಲಿ ರೈತ ಮುಖಂಡರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಯ ಬಗ್ಗೆ ಸರ್ಕಾರ ಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಪ್ರತಿಭಟನೆ ಸ್ಥಗಿತಗೊಳಿಸಲು ಕೇಂದ್ರ ಕೃಷಿ ಸಚಿವರು ರೈತರಿಗೆ ಮನವಿ ಮಾಡಿದ್ದಾರೆ.
ಪ್ರತಿಭಟನೆಯನ್ನು ನಿಲ್ಲಿಸಿ, ಮಾತುಕತೆಗೆ ಬರಬೇಕೆಂದು ನಾವು ರೈತರಿಗೆ ಮನವಿ ಮಾಡುತ್ತೇವೆ. ಆದರೂ ಪ್ರತಿಭಟನೆಯನ್ನು ನಿಲ್ಲಿಸುವ ನಿರ್ಧಾರ ರೈತ ಸಂಘಗಳು ಮತ್ತು ರೈತರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಮತ್ತು ಅದರ ಗಡಿ ಪ್ರದೇಶಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಆ ಕಾಯ್ದೆಗಳನ್ನು ರದ್ದು ಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.