ನವದೆಹಲಿ: ಲೋಕಸಭೆ ಕಲಾಪ ಮಧ್ಯರಾತ್ರಿಯವರೆಗೂ ನಡೆಯಲಿದ್ದು, ರಾಷ್ಟ್ರಪತಿ ಭಾಷಣ ವಂದನಾ ಸಮರ್ಪಣೆ ನಡೆಯಲಿದೆ. ಆದರೆ ಇದಕ್ಕೂ ಮೊದಲು ಕಲಾಪಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದವು. ಕಲಾಪದ ಆರಂಭದಿಂದಲೂ ಪ್ರತಿಪಕ್ಷಗಳು ಗದ್ದಲ ಮಾಡಿ ಕೃಷಿ ಮಸೂದೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದವು.
ಇನ್ನು ಗದ್ದಲದ ನಡುವೆ ಕಲಾಪವು ಸುಗಮವಾಗಿ ನಡೆಸಲು ರಕ್ಷಣಾ ಸಚಿವ ರಾಜನಾಥ್ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು. ರಾಷ್ಟ್ರಪತಿಗಳ ಭಾಷಣದ ಮೇಲೆ ನಿರ್ಣಯ ಅಂಗೀಕರಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದ್ದು, ಅದಕ್ಕಾಗಿ ಗೌರವ ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ. ಲೋಕಸಭೆಯಲ್ಲಿ ಈ ಸಂಪ್ರದಾಯ ಮುರಿಯಬಾರದು ಎಂದು ಮನವಿ ಮಾಡಿದರು. ಬಳಿಕ ಈ ಮನವಿಯನ್ನು ಪ್ರತಿಯೊಬ್ಬ ಸದಸ್ಯರು ಒಪ್ಪಿಕೊಂಡು ವಂದನಾ ನಿರ್ಣಯಕ್ಕೆ ಅನುವು ಮಾಡಿಕೊಡಲಾಯಿತು.
ಈ ವಿಷಯವನ್ನು ಇಟ್ಟುಕೊಂಡು ಸದನದ ಬಾವಿಗಿಳಿದ ವಿಪಕ್ಷಗಳು ಗದ್ದಲ ಸೃಷ್ಟಿಸಿದವು. ಈ ಹಿನ್ನೆಲೆ ಸಭಾಪತಿ ಓಮ್ ಬಿರ್ಲಾ ಕಲಾಪವನ್ನು ಕೆಲ ಕಾಲ ಮುಂದೂಡಿದ್ದರು. ಇಂದಿನ ಕಲಾಪದಲ್ಲಿ ರೈತ ಹೋರಾಟ ಕುರಿತ ಚರ್ಚೆ ಸದನದಲ್ಲಿ ಪ್ರತಿಧ್ವನಿಸಿತು. ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಜನವರಿ 26ರ ಗಲಭೆಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿದರು.