ನವದೆಹಲಿ: ಆಫ್ಘನ್ನಲ್ಲಿ ಸಿಲುಕಿರುವ ಭಾರತೀಯ ಅಲ್ಪಸಂಖ್ಯಾತರ ಸುರಕ್ಷತೆಗೆ ಸಂಬಂಧಿಸಿದಂತೆ ಕಾಬೂಲ್‌ನ ಗುರುದ್ವಾರ ಸಮಿತಿಯ ಅಧ್ಯಕ್ಷರೊಂದಿಗೆ ಸಂಪರ್ಕದಲ್ಲಿರುವುದಾಗಿ ಡಿಎಸ್‌ಜಿಎಂಸಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಘಜನಿ ಮತ್ತು ಜಲಾಲಾಬಾದ್‌ನಲ್ಲಿ ವಾಸಿಸುವ 320 ಕ್ಕೂ ಹೆಚ್ಚು ಅಲ್ಪಸಂಖ್ಯಾತರು (50 ಹಿಂದೂಗಳು ಮತ್ತು 270 ಕ್ಕೂ ಹೆಚ್ಚು ಸಿಖ್ಖರು ಸೇರಿದಂತೆ) ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ. ಕಾಬೂಲ್ ಮತ್ತು ಸಂಗತ್ನ ಗುರುದ್ವಾರ ಸಮಿತಿಯ ಅಧ್ಯಕ್ಷರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಗುರುದ್ವಾರ ಸಮಿತಿಯ ಅಧ್ಯಕ್ಷರನ್ನು ತಾಲಿಬಾನ್ ನಾಯಕರು ಭೇಟಿಯಾಗಿದ್ದು, ಭಾರತೀಯ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಭರವಸೆ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ರಾಜಕೀಯ ಮತ್ತು ಸೇನಾ ಬದಲಾವಣೆಗಳು ನಡೆಯುತ್ತಿದ್ದರೂ ಹಿಂದೂಗಳು ಮತ್ತು ಸಿಖ್ಖರ ರಕ್ಷಣೆಯೇ ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.