ಮುಂಬೈ/ಚೆನ್ನೈ: ದೇಶದ ಇಂದಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಿವಸೇನೆ ಹಾಗೂ ಎಐಎಡಿಎಂಕೆ ಈ ಎರಡೂ ಪ್ರಾದೇಶಿಕ ಪಕ್ಷಗಳು ಒಂದೇ ದೋಣಿಯಲ್ಲಿ ಸಾಗುತ್ತಿವೆ ಎನಿಸುತ್ತಿದೆ. ಎರಡೂ ಪಕ್ಷಗಳಿಗೆ 50ಕ್ಕೂ ಹೆಚ್ಚು ವರ್ಷ ವಯಸ್ಸಾಗಿದ್ದು, ಎರಡೂ ಒಡೆದು ಛಿದ್ರವಾಗುವ ಹಂತದಲ್ಲಿವೆ!.
ಠಾಕ್ರೆ vs ಶಿಂದೆ- ಯಾರಿಗೆ ಬಿಲ್ಲು ಬಾಣ?: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದ ನೇತಾರ ಏಕನಾಥ್ ಶಿಂದೆ ಶಿವಸೇನೆಯ ಬಿಲ್ಲು ಬಾಣದ ಗುರುತು ಪಡೆಯಲು ಹವಣಿಸುತ್ತಿದ್ದಾರೆ. ತಾವೇ ನಿಜವಾದ ಶಿವಸೈನಿಕರು ಹಾಗೂ ನಿಜವಾದ ಬಾಳಾಸಾಹೇಬ್ ಠಾಕ್ರೆ ಹಿಂದುತ್ವದ ಪ್ರತಿಪಾದಕರು ಎಂದು ಶಿಂದೆ ಬಣದ ಶಾಸಕರು ಹೇಳುತ್ತಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಾಕಷ್ಟು ಸಂಖ್ಯೆಯ ಶಾಸಕರನ್ನು ತಮ್ಮ ಗುಂಪಿನೊಂದಿಗೆ ಹೊಂದಿರುವುದು ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸಿಲುಕದಿರುವುದು ಶಿವಸೇನಾ ಬಂಡಾಯ ಶಾಸಕರ ಗುಂಪಿನ ಸದ್ಯದ ಆದ್ಯತೆ. ಇದಾದ ನಂತರ ನಿಜವಾದ ಶಿವಸೇನೆ ಯಾರದ್ದು ಎಂಬುದು ಖಾತ್ರಿಯಾಗುತ್ತದೆ. ಈ ವಿಷಯವನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ವಿಧಾನಸಭೆಯಲ್ಲಿ ಬಹುಮತ ಯಾರಿಗಿದೆ ಎಂಬುದು ಇಲ್ಲಿ ಮೊದಲ ಪ್ರಶ್ನೆ. ಎರಡನೆಯದಾಗಿ, ಇಂಥ ಬಿಕ್ಕಟ್ಟುಗಳಲ್ಲಿ ಪಕ್ಷದ ಚಿಹ್ನೆ ಯಾರಿಗೆ ನೀಡಬೇಕೆಂಬುದರ ಬಗ್ಗೆ ಹಿಂದೆ ಚುನಾವಣಾ ಆಯೋಗ ಯಾವ ರೀತಿ ನಿರ್ಧಾರಗಳನ್ನು ಕೈಗೊಂಡಿದೆ ಎಂಬುದಾಗಿದೆ.
ಪಕ್ಷದ ಚಿಹ್ನೆಯ ವಿಚಾರ ನಂತರ ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ತಮ್ಮದೇ ನಿಜವಾದ ಶಿವಸೇನೆ, 39 ಶಾಸಕರು ತಮ್ಮೊಂದಿಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಶಿಂದೆ ಗುಂಪು ಪ್ರಯತ್ನಿಸುತ್ತಿದೆ. 55ರಲ್ಲಿ ಎರಡು ಮೂರಾಂಶದಷ್ಟು ಶಾಸಕರು ತಮ್ಮೊಂದಿಗಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ತಮಗೆ ಅನ್ವಯವಾಗಲಾರದು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.
"ವಿಶ್ವಾಸಮತ ಯಾಚನೆಯ ನಂತರ ಹಾಗೂ ವಿಧಾನಸಭೆಯಲ್ಲಿನ ಎಲ್ಲ ಅಡ್ಡಿ ಆತಂಕಗಳು, ಕಾನೂನಾತ್ಮಕ ಸಮಸ್ಯೆಗಳು ನಿವಾರಣೆಯಾದ ನಂತರ ಇವರು ಪಕ್ಷದ ಚಿಹ್ನೆಯ ವಿಷಯವನ್ನು ಚುನಾವಣಾ ಆಯೋಗದ ಬಳಿಗೆ ಕೊಂಡೊಯ್ಯಲಿದ್ದಾರೆ. ಇದಕ್ಕಾಗಿ ಅವರಿಗೆ ವಲಯವಾರು ಶಾಖೆಗಳು, ಜಿಲ್ಲಾ ಕಾರ್ಯಕಾರಿಣಿ ಮತ್ತು ಕಾರ್ಯಕರ್ತರ ಬೆಂಬಲ ಬೇಕಾಗುತ್ತದೆ. ಈ ವಿಷಯದಲ್ಲಿ ಶಿವಸೇನೆಯು ಖಂಡಿತವಾಗಿಯೂ ಅವರಿಗೆ ಪೈಪೋಟಿ ನೀಡಲಿದೆ.
ಆದರೆ ಡೆಪ್ಯೂಟಿ ಸ್ಪೀಕರ್ರಿಂದ ಅವರು ಅರ್ಹ ಎಂದು ಘೋಷಿಸಲ್ಪಟ್ಟರೆ ಮತ್ತು ಸುಪ್ರೀಂಕೋರ್ಟ್ನಲ್ಲಿ ಜಯಗಳಿಸಿದರೆ ಸಂಪೂರ್ಣ ಕತೆ ಬದಲಾಗುತ್ತದೆ. ಹಾಗಾದರೆ ಪಕ್ಷದ ಚಿಹ್ನೆ ಯಾರ ಬಳಿ ಉಳಿಯಲಿದೆ? ಹೆಚ್ಚು ಸಂಖ್ಯೆಯ ಶಾಸಕರು ತಮ್ಮೊಂದಿಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಪಕ್ಷದ ಚಿಹ್ನೆ ಏಕನಾಥ್ ಶಿಂದೆ ಗುಂಪಿಗೆ ಸಿಗುತ್ತದೆ ಎಂಬುದರ ಬಗ್ಗೆ ಯಾವುದೇ ಗ್ಯಾರಂಟಿಯಿಲ್ಲ.