ಕಲಮಶ್ಶೇರಿ (ಕೇರಳ):ಪ್ರಕರಣವೊಂದರ ಆರೋಪಿಗಳಿಂದ ಹಣ ಪಡೆದ ಆರೋಪದ ಮೇಲೆ ಕರ್ನಾಟಕದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕೇರಳ ಕೊಚ್ಚಿ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 16ರಂದು ಮತ್ತೆ ಕಲಮಶ್ಶೇರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ಷರತ್ತಿನ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ದಾಖಲಾದ ಹಣಕಾಸು ವಂಚನೆ ಪ್ರಕರಣದಲ್ಲಿ ಕೊಚ್ಚಿಯ ಅಖಿಲ್ ಅಲ್ಬಿ ಮತ್ತು ನಿಖಿಲ್ ಜೋಸೆಫ್ ಎಂಬ ಯುವಕರು ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣದಿಂದ ಆರೋಪಿಗಳ ಹೆಸರನ್ನು ಕೈಬಿಡಲು ಕರ್ನಾಟಕ ಪೊಲೀಸ್ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿತ್ತು. ನಂತರ ಮಾತುಕತೆ ನಡೆದು ಇಬ್ಬರು ಆರೋಪಿಗಳಿಂದ ಒಟ್ಟೂ 4 ಲಕ್ಷ ರೂ. ಹಣ ಪಡೆದ ಆರೋಪ ಪ್ರಕರಣ ಇದಾಗಿದೆ.
ಷರತ್ತಿನ ಮೇಲೆ ಪೊಲೀಸರ ಬಿಡುಗಡೆ: ಈ ಹಣ ಪಡೆದ ಬಳಿಕವೂ ಓರ್ವ ಆರೋಪಿಯನ್ನು ಹಿಡಿದುಕೊಂಡು ಕರ್ನಾಟಕ ಪೊಲೀಸ್ ತಂಡ ರಾಜ್ಯಕ್ಕೆ ವಾಪಸಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಆರೋಪಿಗಳ ಪೈಕಿ ಓರ್ವನ ಸಂಬಂಧಿ ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದರಿಂದ ಈ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೇ, ಈ ಹಿನ್ನೆಲೆಯಲ್ಲಿ ಕಲಮಶ್ಸೆರಿ ಪೊಲೀಸರು ವಾಹನ ತಡೆದು ಕರ್ನಾಟಕದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಳಿಕ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ.