ಇಂಫಾಲ್(ಮಣಿಪುರ):ಕೋವಿಡ್ ವ್ಯಾಕ್ಸಿನೇಷನ್ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಈಗ ಮಣಿಪುರ ರಾಜ್ಯ ಸರ್ಕಾರ ಕೋವಿಡ್ ವ್ಯಾಕ್ಸಿನೇಷನ್(COVID Vaccination) ಹಾಕಿಸಿಕೊಳ್ಳುವವರಲ್ಲಿ ಕೆಲವು ಅದೃಷ್ಟಶಾಲಿಗಳಿಗೆ ಟಿವಿ, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ (ಕಂಬಳಿ) ಗೆಲ್ಲುವ ಅವಕಾಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ಬೃಹತ್ ವ್ಯಾಕ್ಸಿನೇಷನ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮೂರು ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗೆ ಈ ಅವಕಾಶ ನೀಡಲಾಗಿದೆ. 'ಲಸಿಕೆ ಪಡೆಯಿರಿ, ಬಹುಮಾನ ಗೆಲ್ಲಿ' ಎಂಬ ಘೋಷ ವಾಕ್ಯದಡಿ ಈ ಅವಕಾಶ ನೀಡಲಾಗಿದೆ.
ಅಕ್ಟೋಬರ್ 24, ಅಕ್ಟೋಬರ್ 31 ಹಾಗೂ ನವೆಂಬರ್ 7ರಂದು ಲಸಿಕಾ ಅಭಿಯಾನ ನಡೆಯಲಿದೆ. ಮೊದಲ ಬಹುಮಾನವಾಗಿ ಒಂದು ದೊಡ್ಡ ಪರದೆಯ ಟಿವಿ, ಎರಡನೇ ಬಹುಮಾನವಾಗಿ ಮೊಬೈಲ್ ಫೋನ್ ಹಾಗೂ ಮೂರನೇ ಬಹುಮಾನವಾಗಿ ಕಂಬಳಿಗಳನ್ನು ಹಾಗೂ 10 ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.