ನವದೆಹಲಿ : 12 ತಿಂಗಳಲ್ಲಿ ಭಾರತೀಯರು 7.6 ಕೋಟಿ ಬಿರಿಯಾನಿ ಆರ್ಡರ್‌ಗಳನ್ನು ಮಾಡಿದ್ದಾರೆ ಎಂದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಬಹಿರಂಗಪಡಿಸಿದೆ. ಪ್ರತಿ ವರ್ಷ ಜುಲೈ 2ರಂದು ಅಂತಾರಾಷ್ಟ್ರೀಯ ಬಿರಿಯಾನಿ ದಿನ ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನ ಸ್ವಿಗ್ಗಿ ಭಾರತೀಯರ ಬಿರಿಯಾನಿ ಪ್ರೀತಿಯ ಬಗ್ಗೆ ವಿಶೇಷ ಮಾಹಿತಿ ಹೊರಹಾಕಿದೆ. ಕಂಪನಿಯ ಪ್ರಕಾರ, ದೇಶದಾದ್ಯಂತ ಜನರು ಪ್ರತಿ ನಿಮಿಷಕ್ಕೆ 219 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಸುಗಂಧಭರಿತ 'ಲಕ್ನೋವಿ ಬಿರಿಯಾನಿ'ಯಿಂದ ಮಸಾಲೆಯುಕ್ತ 'ಹೈದರಬಾದಿ ದಮ್ ಬಿರಿಯಾನಿ' ಮತ್ತು ಸುವಾಸನೆಯ 'ಕೋಲ್ಕತ್ತಾ ಬಿರಿಯಾನಿ'ಯಿಂದ ಪರಿಮಳಯುಕ್ತ 'ಮಲಬಾರ್ ಬಿರಿಯಾನಿ'ವರೆಗೆ ಹಲವಾರು ರೀತಿಯ ಬಿರಿಯಾನಿಗಳನ್ನು ಭಾರತೀಯರು ತರಿಸಿಕೊಂಡಿದ್ದಾರೆ.
ಸ್ವಿಗ್ಗಿಯ ಆರ್ಡರ್ ವಿಶ್ಲೇಷಣೆಯು 2023 ರ ಮೊದಲಾರ್ಧದಿಂದ ಕೆಲವು ಆಸಕ್ತಿದಾಯಕ ಬಿರಿಯಾನಿ ಆರ್ಡರ್ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ. ಕಳೆದ ಐದೂವರೆ ತಿಂಗಳಲ್ಲಿ, 2022 ರ ಇದೇ ಅವಧಿಗೆ ಹೋಲಿಸಿದರೆ ಬಿರಿಯಾನಿ ಆರ್ಡರ್‌ಗಳಲ್ಲಿ ಶೇಕಡಾ 8.26 ರಷ್ಟು ಬೆಳವಣಿಗೆಯಾಗಿದೆ. ದೇಶಾದ್ಯಂತ 2.6 ಲಕ್ಷಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳು ಸ್ವಿಗ್ಗಿ ಮೂಲಕ ಬಿರಿಯಾನಿ ನೀಡಿದರೆ, ಅವುಗಳಲ್ಲಿ 28,000 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಕೇವಲ ಬಿರಿಯಾನಿ ತಯಾರಿಸುವುದರಲ್ಲಿಯೇ ಪರಿಣತಿ ಪಡೆದಿವೆ.
ಅತ್ಯಧಿಕ ಬಿರಿಯಾನಿ ಯಾವ ನಗರದಲ್ಲಿವೆ ಎಂದು ನೋಡಿದರೆ, ಬೆಂಗಳೂರು ಸುಮಾರು 24,000 ಬಿರಿಯಾನಿ ಸರ್ವಿಂಗ್ ರೆಸ್ಟೋರೆಂಟ್‌ಗಳೊಂದಿಗೆ ಮುಂಚೂಣಿಯಲ್ಲಿದೆ. ಮುಂಬೈ 22,000 ಮತ್ತು ದೆಹಲಿ 20,000ಕ್ಕೂ ಹೆಚ್ಚು ಬಿರಿಯಾನಿ ರೆಸ್ಟೋರೆಂಟ್ಗಳನ್ನು ಸ್ವಿಗ್ಗಿಯಲ್ಲಿ ಹೊಂದಿವೆ. ಬಿರಿಯಾನಿ ಬಳಕೆಯಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದೆ. ಈ ವರ್ಷದ ಜೂನ್‌ವರೆಗೆ ಇಲ್ಲಿಂದ 7.2 ಮಿಲಿಯನ್ ಆರ್ಡರ್ ಮಾಡಲಾಗಿದೆ. ಬೆಂಗಳೂರು ಸುಮಾರು 5 ಮಿಲಿಯನ್ ಆರ್ಡರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಸುಮಾರು 3 ಮಿಲಿಯನ್ ಆರ್ಡರ್‌ಗಳೊಂದಿಗೆ ಚೆನ್ನೈ ಮೂರನೇ ಸ್ಥಾನದಲ್ಲಿದೆ ಎಂದು ಕಂಪನಿ ಉಲ್ಲೇಖಿಸಿದೆ.