ನವದೆಹಲಿ: ಮದುವೆ ಎಂದರೆ ಅಲ್ಲಿ ಸಂಭ್ರಮ. ಈ ಸಂಭ್ರಮದ ಮೆರುಗು ಹೆಚ್ಚಿಸುವಂತೆ ಮಾಡುವುದು ಮದುಮಗನ ಮೆರವಣಿಗೆ. ಈ ಅದ್ದೂರಿ ಮೆರವಣಿಗೆಯಲ್ಲಿ ಮದುಮಗನ ಕೊರಳಿಗೆ ಕೇವಲ ಹೂವಿನ ಹಾರ ಮಾತ್ರವಲ್ಲದೇ, ದುಡ್ಡಿನ ಹಾರವನ್ನೇ ಹಾಕಿ ಸಂತಸ ಪಡುತ್ತಾರೆ. ಈ ದುಡ್ಡಿನ ಹಾರದ ಮೇಲೆ ಕಣ್ಣು ಹಾಕಿದ ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್ಸ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಘಟನೆಯ ವಿವರ:ಮದುಮಗನ ಕೊರಳಲಿದ್ದ 10 ಸಾವಿರ ರೂಪಾಯಿ ನೋಟಿನ ಹಾರವನ್ನು ಜಸ್ಮೀತ್ ಸಿಂಗ್ ಮತ್ತು ರಾಕೀವ್ ಮೆಹ್ತೊ ಎಂಬುವವರು ಕದ್ದಿದ್ದು, ಅವರನ್ನು ಜಗತ್ಪುರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಇಬ್ಬರು ಆರೋಪಿಗಳು ಗೀತಾ ಕಾಲೊನಿ ನಿವಾಸಿಗಳಾಗಿದ್ದಾರೆ. ಘಟನೆ ಕುರಿತು ಮಾತನಾಡಿರುವ ಡಿಸಿಪಿ ರೋಹಿತ್ ಮೀನಾ, ’’ಜನವರಿ 31ರಂದು ಜಗತ್ಪುರಿ ಪೊಲೀಸ್ ಠಾಣೆಯಲ್ಲಿ ವರನ ಮಾಲೆ ಕಿತ್ತು ಪರಾರಿಯಾಗಿರುವ ಸಂಬಂಧ ದೂರ ದಾಖಲಾಗಿತ್ತು. ಈ ಸಂಬಂಧ ಮಾಹಿತಿ ಪಡೆದ ತಕ್ಷಣ ಜಗತ್ಪುರಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಅನು ಗುಪ್ತಾ ಅವರ ಮದುವೆ ಸ್ಟಾರ್ ಪ್ಲೇಸ್ನಲ್ಲಿ ನಡೆಯಬೇಕಿತ್ತು. ಮದುವೆ ಮಂಟಪಕ್ಕೆ ವರನನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತಿತ್ತು. ಈ ವೇಳೆ, ಆತನಿಗೆ ಐದುನೂರು ರೂಪಾಯಿ ನೋಟಿನ ಹಾರವನ್ನು ಹಾಕಲಾಗಿತ್ತು. ಈ ನೋಟಿನ ಹಾರವನ್ನು ಕಿತ್ತುಕೊಂಡು ಇಬ್ಬರು ಪರಾರಿಯಾಗಿದ್ದರು. ನೋಟಿನ ಹಾರ ಕಿತ್ತುಕೊಂಡ ಇಬ್ಬರು ಆರೋಪಿಗಳು ಸ್ಕೂಟಿ ಮೂಲಕ ತಪ್ಪಿಸಿಕೊಂಡಿದ್ದರು‘‘ ಎಂದು ವರನ ಸಹೋದರ ಅಂಕಿತ್ ಗುಪ್ತಾ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ವರನ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶಿಸಲಾಯಿತು. ಈ ಸಂಬಂಧ ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಲಾಗಿದೆ. ಪ್ರಕರಣ ಸಂಬಂಧ ಸುತ್ತಮುತ್ತಲಿದ್ದ 80 ಸಿಸಿಟಿವಿ ಗಳನ್ನು ಪರಿಶೀಲನೆ ನಡೆಸಿ, ಸ್ಕೂಟಿಯ ಸುಳಿವನ್ನು ಕೂಡಾ ಪತ್ತೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.