ನವದೆಹಲಿ: 2023ನೇ ವರ್ಷ ಕೊನೆಗೊಳ್ಳುತ್ತಿದ್ದಂತೆಯೇ ಸ್ವಿಗ್ಗಿ ತನ್ನ ಗ್ರಾಹಕರು ಯಾವೆಲ್ಲ ರೀತಿ ಆಹಾರ ಆರ್ಡರ್ ಮಾಡಿದ್ದಾರೆ. ಯಾವ ಆಹಾರ ಅತಿ ಹೆಚ್ಚು ಆರ್ಡರ್ ಆಗಿದೆ ಸೇರಿದಂತೆ ಹಲವಾರು ಕುತೂಹಲಕಾರಿ ಮಾಹಿತಿಗಳನ್ನು ಬಿಡುಗಡೆ ಮಾಡಿದೆ. ಸ್ವಿಗ್ಗಿಯಲ್ಲಿ ಭಾರತೀಯರು ಹೇಗೆಲ್ಲ ಆರ್ಡರ್ ಮಾಡಿದ್ದಾರೆ ('How India Swiggy'd) ಶೀರ್ಷೀಕೆಯಡಿ ಸ್ವಿಗ್ಗಿ 2023ರ ಆರ್ಡರ್ ಟ್ರೆಂಡ್ ಬಗ್ಗೆ ಮಾಹಿತಿ ನೀಡಿದೆ. ಮುಂಬೈನ ಒಬ್ಬ ಗ್ರಾಹಕ 2023ರಲ್ಲಿ ಸ್ವಿಗ್ಗಿಯಲ್ಲಿ 42.3 ಲಕ್ಷ ರೂಪಾಯಿ ಮೌಲ್ಯದ ಆಹಾರ ಆರ್ಡರ್ ಮಾಡಿದ್ದು, ದಾಖಲೆಯಾಗಿದೆ.
ಚೆನ್ನೈ, ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲಿನ ಕೆಲ ಗ್ರಾಹಕರು ಈ ವರ್ಷದಲ್ಲಿ ತಲಾ 10 ಸಾವಿರಕ್ಕೂ ಅಧಿಕ ಬಾರಿ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. ಸತತ ಎಂಟನೇ ವರ್ಷದಲ್ಲಿ ಬಿರಿಯಾನಿ ಈ ಬಾರಿಯೂ ಟಾಪ್ ಸ್ಥಾನದಲ್ಲಿದೆ. 2023 ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಪ್ರತಿ 5.5 ಚಿಕನ್ ಬಿರಿಯಾನಿಗಳಿಗೆ ಒಂದು ಸಸ್ಯಾಹಾರಿ ಬಿರಿಯಾನಿ (ವೆಜ್ ಬಿರಿಯಾನಿ)ಯನ್ನು ಆರ್ಡರ್ ಮಾಡಲಾಗಿದೆ.
1633 ಬಿರಿಯಾನಿ ಆರ್ಡರ್!!:ಸ್ವಿಗ್ಗಿ ಪ್ಲಾಟ್ಫಾರ್ಮ್ನಲ್ಲಿ ಬಿರಿಯಾನಿಯನ್ನು 40,30,827 ಬಾರಿ ಸರ್ಚ್ ಮಾಡಲಾಗಿದೆ. ಆರರಲ್ಲಿ ಒಂದು ಬಿರಿಯಾನಿಯ ಆರ್ಡರ್ ಹೈದರಾಬಾದಿನಿಂದ ಬಂದಿದೆ. ಹೈದರಾಬಾದಿನ ಗ್ರಾಹಕನೊಬ್ಬ ಈ ವರ್ಷ 1633 ಬಿರಿಯಾನಿ ಆರ್ಡರ್ ಮಾಡಿರುವುದು ವಿಶೇಷವಾಗಿದೆ. ಅಂದರೆ ಸರಾಸರಿ ದಿನಕ್ಕೆ ಆತ ನಾಲ್ಕು ಬಿರಿಯಾನಿ ತರಿಸಿಕೊಂಡಿದ್ದಾನೆ.
ದುರ್ಗಾ ಪೂಜೆಯ ಸಮಯದಲ್ಲಿ ಗುಲಾಬ್ ಜಾಮೂನ್ಗಾಗಿ 7.7 ಮಿಲಿಯನ್ ಆರ್ಡರ್ ಬಂದಿವೆ. ಗರ್ಬಾದ ಜೊತೆಗೆ, ನವರಾತ್ರಿಯ ಎಲ್ಲ ಒಂಬತ್ತು ದಿನಗಳಲ್ಲಿ ಸಸ್ಯಾಹಾರಿ ಆರ್ಡರ್ ಗಳ ಪೈಕಿ ಮಸಾಲಾ ದೋಸೆ ಮುಂಚೂಣಿಯಲ್ಲಿತ್ತು. ಇನ್ನು ಹೈದರಾಬಾದಿನ ಗ್ರಾಹಕರೊಬ್ಬರು ಈ ವರ್ಷ ಇಡ್ಲಿಗಾಗಿ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.