ನವದೆಹಲಿ :ಕಳೆದ ಹಲವು ತಿಂಗಳ ಹಿಂದೆವಿಮಾನ ಪ್ರಯಾಣದ ವೇಳೆ ಮಹಿಳಾ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಎರಡು ಘಟನೆಗಳು ಮುನ್ನೆಲೆಗೆ ಬಂದಿದ್ದವು. ಇವು ಸುಸಂಸ್ಕೃತ ಸಮಾಜಕ್ಕೆ ಕಳಂಕ ತರುವುದು ಖಂಡಿತ. ನವೆಂಬರ್ ತಿಂಗಳಲ್ಲಿ ನ್ಯೂಯಾರ್ಕ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ 70 ವರ್ಷದ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ನಂತರದ ತಿಂಗಳಲ್ಲೇ ಅಂದರೆ ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಿಂದ ನವದೆಹಲಿಗೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಯುವಕನೊಬ್ಬ ಸಹ-ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಇದೀಗ ಈ ಘಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಲಹೆ ನೀಡಿದ್ದಾರೆ. ಪ್ರಯಾಣದ ಸಮಯದಲ್ಲಿ ಅಥವಾ ವಿಮಾನ ಹತ್ತುವ ಮೊದಲು ಪ್ರಯಾಣಿಕರಿಗೆ ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯವನ್ನು ನೀಡದಿರುವುದು ಅಥವಾ ಮದ್ಯ ಸೇವಿಸಿದ ವ್ಯಕ್ತಿಗೆ ಪ್ರಯಾಣಿಸಲು ಅವಕಾಶ ನೀಡುವುದನ್ನು ನಿಲ್ಲಿಸಿದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂದು ಅವರು ಹೇಳಿದ್ದಾರೆ.
ಅಂತಹವರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ಪ್ರೋಟೋಕಾಲ್ ಅನ್ನು ಅನುಸರಿಸದ ಏರ್‌ಲೈನ್ಸ್ ಕಂಪನಿಗಳನ್ನು ಸಹ ಕನಿಷ್ಠ 6 ತಿಂಗಳಿಂದ 2 ವರ್ಷಗಳವರೆಗೆ ನೋ ಫ್ಲೈ ವಲಯದಲ್ಲಿ ಸೇರಿಸಬೇಕು. ಇದರೊಂದಿಗೆ, ಅಂತಹ ಪ್ರಕರಣಗಳಿಗೆ ನಿವೃತ್ತ ಮಹಿಳಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಬೇಕು. ಅದು ನಿಗದಿತ ಸಮಯದೊಳಗೆ ತನ್ನ ವರದಿಯನ್ನು ಸಲ್ಲಿಸಬಹುದು. ಡಿಜಿಸಿಎ ಮಾರ್ಗಸೂಚಿಯಂತೆ ಇಂತಹ ಪ್ರಕರಣಗಳನ್ನು ಆಕ್ರಮಣಕಾರಿ ವರ್ತನೆ ಎಂದು ಪರಿಗಣಿಸಲಾಗಿದ್ದು, ಆಯೋಗಕ್ಕೆ ಯಾವುದೇ ರೀತಿಯಲ್ಲೂ ಒಪ್ಪಿಗೆಯಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ :ಕಾಶಿ ವಿಶ್ವನಾಥ ದೇಗುಲದ ಸ್ಪರ್ಶ ದರ್ಶನ ಬಗ್ಗೆ ಸುಳ್ಳು ಸುದ್ದಿ ಹರಡಿದ 9 ಜನರ ವಿರುದ್ಧ ಎಫ್ಐಆರ್