ಬರೇಲಿ(ಉತ್ತರ ಪ್ರದೇಶ):ರಸ್ತೆ ಅಪಘಾತದ ನಂತರ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಎಂಟು ಮಂದಿ ಸಜೀವ ದಹನವಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಶನಿವಾರ ರಾತ್ರಿ ನಡೆಯಿತು. ಮೃತರಲ್ಲಿ ಪುಟ್ಟ ಮಗು ಮತ್ತು ಇತ್ತೀಚೆಗಷ್ಟೇ ಮದುವೆಯಾಗಿದ್ದ ವ್ಯಕ್ತಿ ಸೇರಿದ್ದು, ಎಲ್ಲರೂ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಕಾರಿನ ಟೈಯರ್ ಸ್ಫೋಟಗೊಂಡು ದುರಂತ ಸಂಭವಿಸಿದೆ. ಮೃತರೆಲ್ಲರೂ ಬಹೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಜಾಮ್ ನಗರದ ನಿವಾಸಿಗಳಾಗಿದ್ದಾರೆ. ಸದ್ಯಕ್ಕೆ ಮೃತಪಟ್ಟಿರುವವರ ಪೈಕಿ ಫುರ್ಕಾನ್, ಆರಿಫ್ ಮತ್ತು ಆಸಿಫ್ ಎಂಬ ಮೂವರನ್ನು ಗುರುತಿಸಲಾಗಿದೆ. ಆರಿಫ್‌ಗೆ 8 ದಿನಗಳ ಹಿಂದಷ್ಟೇ ವಿವಾಹವಾಗಿತ್ತು. ಈ ಸಮಾರಂಭದ ವಿವಿಧ ಕಾರ್ಯಗಳನ್ನು ಮುಗಿಸಿ ಹಿಂತಿರುಗುತ್ತಿದ್ದರು ಎಂದು ಬರೇಲಿ ಎಸ್.ಎಸ್.ಪಿ. ಧುಲೆ ಸುಶೀಲ್ ಚಂದ್ರಭಾನ್ ಮಾಹಿತಿ ನೀಡಿದರು.