ರಾಣಿವಾಡ (ರಾಜಸ್ಥಾನ): ಬಿಸಿಲಿನ ತಾಪ ಹೆಚ್ಚಾಗಿ, ಬಾಯಾರಿಕೆಯಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿಗೆ ಕುಡಿಯಲು ನೀರು ಸಿಗದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಹಸಿಲ್ನ ರೋಡಾ ಗ್ರಾಮದಲ್ಲಿ ನಡೆದಿದೆ.
ಜತೆಯಲ್ಲಿದ್ದ ವೃದ್ಧೆ ಕೂಡ ಮೂರ್ಛೆ ಹೋಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ರಾಣಿವಾಡ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ರಾಯ್ಪುರದಿಂದ ತನ್ನ ಅಜ್ಜಿಯೊಂದಿಗೆ ಐದು ವರ್ಷದ ಬಾಲಕಿ ನಡೆದುಕೊಂಡು ರೋಡಾ ಗ್ರಾಮದತ್ತ ಬರುತ್ತಿದ್ದರು. ಈ ವೇಳೆ ಉರಿಬಿಸಿಲು ತಾಳದೆ ಬಾಲಕಿ ಬಳಲಿದ್ದಾಳೆ. ಆ ವೇಳೆ ನೀರು ಸಿಗದೆ ಸ್ವಲ್ಪ ದೂರ ಕ್ರಮಿಸಿ ಪ್ರಾಣಬಿಟ್ಟಿದ್ದಾಳೆ ಎನ್ನಲಾಗಿದೆ.