ಚೆನ್ನೈ: ಪೊಲೀಸ್ ಕರ್ತವ್ಯ ನಿರ್ವಹಣೆ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ ಇಬ್ಬರು ಪೊಲೀಸರನ್ನು ತಮಿಳುನಾಡು ಪೊಲೀಸ್ ಇಲಾಖೆ ಅಮಾನತು ಮಾಡಿದೆ. ವಿಶೇಷ ಸಬ್ ಇನ್ಸ್ಪೆಕ್ಟರ್ ಕಾರ್ತಿಕೇಯನ್ ಮತ್ತು ಸಬ್ ಇನ್ಸ್ಪೆಕ್ಟರ್ ರಾಜೇಂದ್ರನ್ ಅಮಾನತುಗೊಂಡಿರುವ ಅಧಿಕಾರಿಗಳು.
ಕಳೆದ ಡಿಸೆಂಬರ್ 27ರಂದು ಬಿಜೆಪಿ ರಾಜ್ಯಾಧ್ಯಕ್ಷೆ ಕೆ ಅಣ್ಣಾಮಲೈ ನೇತೃತ್ವದಲ್ಲಿನ ಕರಾವಳಿ ಜಿಲ್ಲೆ ನಾಗಪಟ್ಟಿನಂನಲ್ಲಿ ಬಿಜೆಪಿ ರೋಡ್ ಶೋ ನಡೆಸುತ್ತಿತ್ತು. ಎನ್ ಮನ್ ಎನ್ ಮಕ್ಕಳು (ನನ್ನ ಭೂಮಿ, ನನ್ನ ಜನರು) ರೋಡ್ ಶೋಗೆ ಬಂದೋಬಸ್ತ್ನಲ್ಲಿ ಈ ಇಬ್ಬರೂ ಅಧಿಕಾರಿಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದರು. ಅಯುರಿತಿದಳ್ ಎಂಬ ಸಣ್ಣ ಊರಿನಲ್ಲಿ ಈ ಸಂದರ್ಭದಲ್ಲಿ ಪಕ್ಷಕ್ಕೆ ಹೊಸ ಸದಸ್ಯರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇಲ್ಲಿ ಸಾಮಾನ್ಯ ಜನರಿಗೆ ಮೊಬೈಲ್ ನಂಬರ್ಗೆ ಮಿಸ್ಡ್ಕಾಲ್ ಮಾಡಿ ಬಿಜೆಪಿಗೆ ಸೇರುವ ಅವಕಾಶ ನೀಡಲಾಗಿತ್ತು. ಈ ವೇಳೆ ಯುನಿಫಾರಂನಲ್ಲಿದ್ದ ಕಾರ್ತಿಕೇಯನ್ ಮತ್ತು ರಾಜೇಂದ್ರನ್ ಮಿಸ್ಡ್ಕಾಲ್ ಮಾಡಿ ಬಿಜೆಪಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಇಲಾಖೆಯ ಸೇವಾ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಅವರಿಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ನಾಗಪಟ್ಟಿನಂ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾತನಾಡಿ, ಇದು ಸೇವಾ ನಿಯಮದ ಸಂಪೂರ್ಣ ಉಲ್ಲಂಘನೆಯಾಗಿದೆ. ಪೊಲೀಸರು ನಡೆಸಿರುವ ಈ ನೋಂದಣಿ ಪ್ರಕ್ರಿಯೆಯ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದರಲ್ಲಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂಬುದು ಸಾಕ್ಷಿ ಸಿಕ್ಕಿದೆ ಎಂದಿದ್ದಾರೆ.