ನವದೆಹಲಿ: ಇಂದು ಮತ್ತೆ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನ್ಯಾಷನಲ್ ಕಾನ್ಫರೆನ್ಸ್ನ ಸಂಸದ ಪಾರೂಕ್ ಅಬ್ದುಲ್ಲಾ ಹಾಗೂ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಹಾಗೂ ಮನೀಶ್ ತಿವಾರಿ, ಕಾರ್ತಿ ಚಿದಂಬರಂ ಹಾಗೂ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಸೇರಿದಂತೆ 49 ಲೋಕಸಭಾ ಸಂಸದರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಲಾಗಿದೆ. ಇಲ್ಲಿಯವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಿಂದ 95 ಹಾಗೂ ರಾಜ್ಯಸಭೆಯಿಂದ 46 ಸೇರಿ ಒಟ್ಟು 141 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ಆದ ಭದ್ರತಾ ಲೋಪದ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವಂತೆ ಒತ್ತಾಯಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರು ನಿರಂತರವಾಗಿ ಕೋಲಾಹಲ ಸೃಷ್ಟಿಸುತ್ತಿದ್ದಾರೆ. ಇಂದು ಮತ್ತೆ ಸದನದಲ್ಲಿ ಡಿಸೆಂಬರ್ 13ರ ಭದ್ರತಾ ಲೋಪ ವಿಚಾರ ಮುನ್ನೆಲೆಗೆ ಬಂದಿದ್ದು, ವಿರೋಧ ಪಕ್ಷಗಳ ಸಂಸದರು ಮತ್ತದೇ ಪಟ್ಟು ಹಿಡಿದು, ಗದ್ದಲ ಮುಂದುವರಿಸಿದರು. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಂಸದರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದರು. ಈ ಹಿನ್ನೆಲೆ 49 ಲೋಕಸಭಾ ಸಂಸದರನ್ನು ಅಮಾನತುಗೊಳಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ.