ಚೆನ್ನೈ (ತಮಿಳುನಾಡು):ಪಕ್ಷದ ಆಂತರಿಕ ನಿಯಮಗಳನ್ನು ಮೀರಿ, ಮುಗುಗರ ಉಂಟು ಮಾಡುತ್ತಿದ್ದ ಆರೋಪದ ಮೇಲೆ 6 ತಿಂಗಳು ಅಮಾನತಾಗಿದ್ದ ತಮಿಳುನಾಡು ಬಿಜೆಪಿ ನಾಯಕಿ, ಇತರ ರಾಜ್ಯ ಮತ್ತು ಸಾಗರೋತ್ತರ ತಮಿಳು ಅಭಿವೃದ್ಧಿ ವಿಭಾಗದ ಮಾಜಿ ಅಧ್ಯಕ್ಷೆ ಗಾಯತ್ರಿ ರಘುರಾಮ್ ಅವರು ಬಿಜೆಪಿಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿರುವ ಗಾಯತ್ರಿ ಅವರು, ಭಾರವಾದ ಹೃದಯದಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದಿಂದ ಹೊರಗಿದ್ದು ಟ್ರೋಲ್ಗೆ ಒಳಗಾಗುವುದೇ ಇದಕ್ಕಿಂತ ಉತ್ತಮ ಆಯ್ಕೆಯಾಗಿದೆ' ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ:ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ವಿರುದ್ಧ ಗಂಭೀರ ಆರೋಪ ಮಾಡಿರುವ ಗಾಯತ್ರಿ, 'ಅವರ ನಾಯಕತ್ವದಲ್ಲಿ ಪಕ್ಷದ ಮಹಿಳೆಯರು ಸುರಕ್ಷಿತವಾಗಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರು. 6 ತಿಂಗಳು ಅಮಾನತು ಮಾಡಿ ಪಕ್ಷದಿಂದ ದೂರವಿರಿಸಿದರು' ಎಂದು ಹೇಳಿದರು.