ಗೋಲ್ಪಾರಾ (ಅಸ್ಸಾಂ):ಭಯೋತ್ಪಾದಕ ಸಂಘಟನೆಗಳಾದ ಅಲ್ ಖೈದಾ ಇಂಡಿಯನ್ ಸಬ್ಕಾಂಟಿನೆಂಟ್ (ಎಕ್ಯೂಐಎಸ್) ಮತ್ತು ಅನ್ಸರುಲ್ಲಾ ಬಾಂಗ್ಲಾ ಟೀಂ (ಎಬಿಟಿ) ಜೊತೆ ನಂಟು ಹೊಂದಿರುವ ಇಬ್ಬರು ಶಂಕಿತ ಉಗ್ರರನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.
ಟಿಂಕುನಿಯಾ ಶಾಂತಿಪುರ ಮಸೀದಿಯ ಇಮಾಮ್ ಆದ ಅಬ್ದುಸ್ ಸುಭಾನ್ ಮತ್ತು ತಿಲಪಾರಾ ನಾತುನ್ ಮಸೀದಿಯ ಇಮಾಮ್ ಜಲಾಲುದ್ದೀನ್ ಶೇಖ್ ಬಂಧಿತರು. ಈ ಇಬ್ಬರೂ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, 2 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಅವರನ್ನು ಬಂಧಿಸಲಾಗಿದೆ.
ಶಂಕಿತ ಉಗ್ರರ ಬಂಧನ ಬಳಿಕ ಅವರ ಮನೆಗಳನ್ನು ಶೋಧ ನಡೆಸಿದಾಗ ಅಲ್ ಖೈದಾ, ಜಿಹಾದಿಗೆ ಸಂಬಂಧಿತ ವಸ್ತುಗಳು, ಪೋಸ್ಟರ್‌ಗಳು, ಪುಸ್ತಕಗಳು ಮತ್ತು ಇತರ ದಾಖಲೆಗಳ ಜೊತೆಗೆ ಮೊಬೈಲ್ ಫೋನ್‌ಗಳು, ವಿವಿಧ ಮೊಬೈಲ್ ಸಿಮ್ ಮತ್ತು ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಭಯೋತ್ಪಾದಕರಿಗೆ ಬಾಹ್ಯ ನೆರವು ನೀಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಇದಲ್ಲದೇ, ಅಕ್ರಮವಾಗಿ ದೇಶಕ್ಕೆ ಬಂದ ಬಾಂಗ್ಲಾ ಪ್ರಜೆಗಳಗೂ ಆಶ್ರಯ ನೀಡಿದ್ದಾರೆ. ಬಂಧಿತರು 2019 ರ ಡಿಸೆಂಬರ್‌ನಲ್ಲಿ ಮದರಸಾವೊಂದರಲ್ಲಿ ಧರ್ಮ ಸಭೆಯನ್ನು ಆಯೋಜಿಸಿದ್ದರು. ಅಲ್ಲಿಗೆ ಎಕ್ಯೂಐಎಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಅನೇಕ ಬಾಂಗ್ಲಾ ಪ್ರಜೆಗಳನ್ನು ಆಹ್ವಾನಿಸಿ ಉಪನ್ಯಾಸ ಕೊಡಿಸಿದ್ದರು.
ಬಂಧಿತ ಇಬ್ಬರು ಇಮಾಮ್ಗಳು ತಾವು ಎಕ್ಯೂಐಎಸ್ ಉಗ್ರ ಸಂಘಟನೆಯ ಸದಸ್ಯರು ಎಂಬುದನ್ನು ತಾವೇ ಒಪ್ಪಿಕೊಂಡಿದ್ದಾರೆ. ಇದಲ್ಲದೇ ಇವರು ಸ್ಲೀಪರ್ ಸೆಲ್‌ಗಳನ್ನು ನೇಮಿಸಿಕೊಂಡಿದ್ದರು. ಬಾಂಗ್ಲಾದೇಶಿ ಭಯೋತ್ಪಾದಕರಿಂದ ನೇರವಾಗಿ ಹಣದ ನೆರವು ಪಡೆದುಕೊಂಡಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ:ಕೆಲಸ ಕೇಳಿ ಬಂದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ದುರುಳರು, ಮೂವರ ಬಂಧನ