ಪಾಟ್ನಾ:ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ರಾಜ್ಯಸಭಾ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಇಂದು ಪಾಟ್ನಾದ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಉಪಮುಖ್ಯಮಂತ್ರಿಗಳಾದ ತಾರ್ಕಿಶೋರ್ ಪ್ರಸಾದ್, ರೇಣು ದೇವಿ ಮತ್ತು ಇತರ ಸಚಿವರು ಸುಶೀಲ್ ಮೋದಿ ಅವರೊಂದಿಗೆ ಹಾಜರಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ, ವಿಐಪಿ ಅಧ್ಯಕ್ಷ ಮತ್ತು ಸಚಿವ ಮುಖೇಶ್ ಸಹಾನಿ ಮತ್ತು ಇತರ ಶಾಸಕರು ಹಾಜರಿರಲಿದ್ದಾರೆ.
ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗಾಗಿ ಎಲ್ಲಾ ಸಚಿವರು, ಶಾಸಕರು, ಎಂಎಲ್‌ಸಿಗಳು ಮತ್ತು ಪಕ್ಷದ ಮುಖಂಡರು ಬೆಳಗ್ಗೆ 11.30 ಕ್ಕೆ ಪಕ್ಷದ ಕಚೇರಿಯಲ್ಲಿ ಸೇರಲಿದ್ದು, ಸುಶೀಲ್ ಕುಮಾರ್ ಮೋದಿಯವರೊಂದಿಗೆ ಮಧ್ಯಾಹ್ನ 12.15 ಕ್ಕೆ ಆಯುಕ್ತರ ಕಚೇರಿಗೆ ತೆರಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಲೋಕ ಜನಶಕ್ತಿ ಪಕ್ಷದ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಖಾಲಿ ಇರುವ ರಾಜ್ಯಸಭಾ ಸ್ಥಾನಕ್ಕೆ ಸುಶೀಲ್ ಕುಮಾರ್ ಮೋದಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ರೆ ಡಿಸೆಂಬರ್ 14 ರಂದು ಚುನಾವಣೆ ನಡೆಯಲಿದೆ.