ಅಲಿಗಢ್(ಯುಪಿ): ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು (ಜೆಎನ್‌ಎಂಸಿ), ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಶಸ್ತ್ರಚಿಕಿತ್ಸಾ ವಿಭಾಗದ ಅಧ್ಯಕ್ಷ ಅಫ್ಜಲ್ ಅನೀಸ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಮೂವರು ರೋಗಿಗಳ ಹೊಟ್ಟೆಯೊಳಗಿದ್ದ ಸ್ಪಂಜನ್ನು ಹೊರತೆಗೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅನೀಸ್, ಮೂವರು ರೋಗಿಗಳ ಪೈಕಿ ಇಬ್ಬರಿಗೆ ಖಾಸಗಿ ಆಸ್ಪತ್ರೆ ವೈದ್ಯರು ನಡೆಸಿದ ಕೊಲೆಸಿಸ್ಟೆಕ್ಟಮಿ ರಿಸೆಕ್ಷನ್ ನಂತರ ಅವರ ದೇಹದಲ್ಲಿ ಸಮಸ್ಯೆಗಳು ಕಂಡುಬಂದಿವೆ. ಈ ರೋಗಿಗಳು ಜ್ವರ, ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಿದಾಗ ಹೊಟ್ಟೆಯೊಳಗೆ ಅಸ್ಪಷ್ಟವಾದ ಸ್ಪಂಜು ಇರುವುದು ತಿಳಿದುಬಂದಿದೆ. ನಂತರ ನಾವು ಶಸ್ತ್ರಚಿಕಿತ್ಸೆ ಮೂಲಕ ಸ್ಪಂಜನ್ನು ಹೊರತೆಗೆದೆವು. ಖಾಸಗಿ ವೈದ್ಯರ ಅಸಡ್ಡೆಯ ಶಸ್ತ್ರಚಿಕಿತ್ಸೆಯಿಂದಾಗಿ ಹೀಗಾಗಿದೆ. ಸದ್ಯಕ್ಕೆ ಇಬ್ಬರೂ ರೋಗಿಗಳ ಆರೋಗ್ಯ ಉತ್ತಮವಾಗಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದರು.