ಕರ್ನಾಟಕ

karnataka

ETV Bharat / bharat

ಹೊಟ್ಟೆನೋವಿಗೆ ಶಸ್ತ್ರಚಿಕಿತ್ಸೆ, ಯುವಕ ಕೋಮಾ ಸ್ಥಿತಿಯಲ್ಲಿ ಸಾವು.. ಆಸ್ಪತ್ರೆಗೆ ₹40 ಲಕ್ಷ ದಂಡ - young man dies in coma

ಹೊಟ್ಟೆ ನೋವು ಎಂದು ತೆರಳಿದ್ದ ಯುವಕನಿಗೆ ಅನಸ್ತೇಷಿಯಾ ನೀಡಿ ಶಸ್ತ್ರಚಿಕಿತ್ಸೆ ಮಾಡಿದ ವೇಳೆ ಯುವಕ ಐಸಿಯುನಲ್ಲಿ ಮೃತಪಟ್ಟಿದ್ದ. ವೈದ್ಯರ ಯಡವಟ್ಟಿನಿಂದಾದ ಈ ಕೃತ್ಯಕ್ಕೆ 40 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

young-man-dies-in-coma
ಯುವಕ ಕೋಮಾ ಸ್ಥಿತಿಯಲ್ಲಿ ಸಾವು

By

Published : Oct 19, 2022, 1:14 PM IST

ಅಮರಾವತಿ(ಆಂಧ್ರಪ್ರದೇಶ): ವೈದ್ಯೋ ನಾರಾಯಣೋ ಹರಿ ಅಂತಾರೆ. ಅನಾರೋಗ್ಯ ಉಂಟಾದರೆ, ವೈದ್ಯರ ಬಳಿಗೆ ತಪಾಸಣೆಗೆ ಹೋಗ್ತೇವೆ. ಚಿಕಿತ್ಸೆ ನೀಡಿ ಗುಣಪಡಿಸಬೇಕಾದ ವೈದ್ಯ ಸ್ವಲ್ಪ ಯಡವಟ್ಟು ಮಾಡಿದರೂ ರೋಗಿ ಯಮನ ಪಾದ ಸೇರೋದು ಖಂಡಿತ. ಅಂಥದ್ದೇ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಸೇರಿದರೆ, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ವೇಳೆ, ಯುವಕ ಕೋಮಾ ಸ್ಥಿತಿಗೆ ತಲುಪಿ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದರು. ಮಾನವ ಹಕ್ಕುಗಳ ಆಯೋಗದಿಂದ ತನಿಖೆ ನಡೆಸಿದ ಗ್ರಾಹಕ ಆಯೋಗ ಆಸ್ಪತ್ರೆಗೆ 40 ಲಕ್ಷ ರೂಪಾಯಿ ದಂಡ ವಿಧಿಸಿ ಪರಿಹಾರವಾಗಿ ನೀಡಲು ಆದೇಶಿಸಿದೆ.

ಘಟನೆ ಏನು?:2013 ರಲ್ಲಿ ಈ ಘಟನೆ ನಡೆದಿದೆ. ವಿಶಾಖಪಟ್ಟಣದ ಕ್ವೀನ್ಸ್ ಎನ್​ಆರ್​ಐ ಆಸ್ಪತ್ರೆಗೆ ಶೀಲಾ ತುಳಸಿರಾಮ್​(26) ಎಂಬುವರು ಹೊಟ್ಟೆ ನೋವಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ, ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಸಲಹೆ ನೀಡಿದ್ದಾರೆ. ಬಳಿಕ ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ. ಆಪರೇಷನ್​ ವೇಳೆ ವೈದ್ಯರು ನೀಡಿದ ಅನಸ್ತೇಷಿಯಾದಿಂದ ಯುವಕ ಕೋಮಾಕ್ಕೆ ಜಾರಿದ್ದಾರೆ.

ವೈದ್ಯರು ಈ ಬಗ್ಗೆ ರೋಗಿಯ ಕುಟುಂಬಸ್ಥರಿಗೆ ಮಾಹಿತಿ ಕೂಡ ನೀಡಿರಲಿಲ್ಲ. ಕೆಲ ದಿನಗಳ ಬಳಿಕ ಯುವಕ ಐಸಿಯುನಲ್ಲಿ ಮೃತಪಟ್ಟಿದ್ದಾನೆ. ಯುವಕನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಕಿಡಿಕಾರಿದ್ದಾರೆ. ತುಳಸಿರಾಮ್​ಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ. ಸಾಯಲು ಹೇಗೆ ಸಾಧ್ಯ ಎಂದು ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ವಾದಿಸಿದ್ದರು. ವೈದ್ಯರ ಯಡವಟ್ಟಿನಿಂದಲೇ ಯುವಕ ಮೃತಪಟ್ಟಿದ್ದು, 99.99 ಲಕ್ಷ ಪರಿಹಾರ ಕೊಡಿಸಬೇಕು ಎಂದು ಕುಟುಂಬ ಸದಸ್ಯರು 2015 ರಲ್ಲಿ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.

ನಿರ್ಲಕ್ಷ್ಯದಿಂದ ಅಮಾಯಕನ ಜೀವ ಕಳೆದ ಆಸ್ಪತ್ರೆಯ ಮಾಲೀಕರು ಮತ್ತು ಚಿಕಿತ್ಸೆ ನೀಡಿದ ವೈದ್ಯರಾದ ಜನರಲ್ ಸರ್ಜನ್ ಡಾ.ಟಿ.ಎಸ್.ಪ್ರಸಾದ್, ಅರಿವಳಿಕೆ ತಜ್ಞರಾದ ಡಾ.ತನುಜಾ ರಾಜಲಕ್ಷ್ಮಿ ದೇವಿ ಮತ್ತು ಡಾ.ರವಿಚಂದ್ರ ಹಾಸ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು. ಬಳಿಕ ಗ್ರಾಹಕರ ಆಯೋಗ, ಮಾನವ ಹಕ್ಕುಗಳ ಆಯೋಗದೊಂದಿಗೆ ವಿಚಾರಣೆ ನಡೆಸಿದೆ. ಈ ವೇಳೆ ಯುವಕನ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಿಸಿಲ್ಲದಿರುವುದು ಪತ್ತೆಯಾಗಿದೆ. ಇದನ್ನು ಆಸ್ಪತ್ರೆಯ ವೈದ್ಯರು ಕೂಡ ಒಪ್ಪಿಕೊಂಡಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕ ಮೃತಪಟ್ಟಿದ್ದು, ವಿಚಾರಣೆಯಲ್ಲಿ ದೃಢಪಟ್ಟ ಕಾರಣ ಕುಟುಂಬಕ್ಕೆ ಪರಿಹಾರವಾಗಿ 40 ಲಕ್ಷ ರೂಪಾಯಿ ನೀಡಬೇಕು ಎಂದು ಆಸ್ಪತ್ರೆಗೆ ಆಯೋಗ ದಂಡ ವಿಧಿಸಿದೆ.

ಓದಿ:ಸರಾಸರಿ ಜೀವಿತಾವಧಿ ಕಡಿಮೆ ಮಾಡಿದ ಸಾಂಕ್ರಾಮಿಕ ರೋಗಗಳು

ABOUT THE AUTHOR

...view details