ನವದೆಹಲಿ: 2021-22ರ ಮೊದಲ ಒಂಬತ್ತು ತಿಂಗಳಲ್ಲಿ 1.78 ಕೋಟಿಗೂ ಹೆಚ್ಚು ಟಿಕೆಟ್ ರಹಿತ ಪ್ರಯಾಣಿಕರನ್ನು ಮತ್ತು ಕಾಯ್ದಿರಿಸದ ಲಗೇಜ್ ಹೊಂದಿರುವವರನ್ನು ರೈಲ್ವೆ ಇಲಾಖೆ ಪತ್ತೆ ಮಾಡಿದೆ. ಕೊರೊನಾ ಇಲ್ಲದ ಸಮಯ 2019-2020ರ ವೇಳೆಗೆ ಹೋಲಿಕೆ ಮಾಡಿದರೆ ಸುಮಾರು 79 ಪ್ರತಿಶತದಷ್ಟು ಈ ಅಪರಾಧ ಪ್ರಕರಣ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
2020-21 ರ ಕೊರೊನಾ ನಿರ್ಬಂಧದ ವೇಳೆ ಇಂಥಹ ಪ್ರಯಾಣಿಕರ ಸಂಖ್ಯೆ 27 ಲಕ್ಷದಷ್ಟಿತ್ತು. ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ರೈಲ್ವೆ ಮಂಡಳಿಯು ಈ ಡೇಟಾವನ್ನು ನೀಡಿದೆ. ಹಾಗೆಯೇ ಈ ಡಾಟಾದಲ್ಲಿ ಏಪ್ರಿಲ್-ಡಿಸೆಂಬರ್ 2021 ರ ಅವಧಿಯಲ್ಲಿ 1.78 ಕೋಟಿಗೂ ಹೆಚ್ಚು ಪ್ರಯಾಣಿಕರು ಟಿಕೆಟ್ ಇಲ್ಲದೆ/ಅಸಮರ್ಪಕ ಟಿಕೆಟ್ ಮತ್ತು ಕಾಯ್ದಿರಿಸದ ಲಗೇಜ್‌ನೊಂದಿಗೆ ಪ್ರಯಾಣಿಸಿದ ಮಾಹಿತಿಯನ್ನೂ ನೀಡಲಾಗಿದೆ.
ಇಂಥಹ ಪ್ರಯಾಣಿಕರಿದ ರೈಲ್ವೆ ಇಲಾಖೆಯು 1,017.48 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆಯಂತೆ. ಈ ಅಪರಾಧಕ್ಕೆ ಹೆಚ್ಚಿನ ಕೋವಿಡ್ ನಿರ್ಬಂಧದ ವೇಳೆ ಅನೇಕ ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳು ಆನ್‌ಲೈನ್ ಬುಕಿಂಗ್ ಮತ್ತು ಸೀಮಿತ ಸೇವೆಗಳನ್ನು ಮಾತ್ರ ಹೊಂದಿದ್ದೇ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.