ನವದೆಹಲಿ: ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಇದೀಗ ಹೊಸದಾಗಿ ಪರಿಚಯಿಸಲಾದ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತಿಹಾಸ ಸೃಷ್ಟಿಸಿರುವ ಸುರೇಖಾ ಯಾದವ್ ಅವರು ಕುರಿತು ಕೇಂದ್ರ ರೈಲ್ವೇ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಸೋಮವಾರ ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲನ್ನು ಅವರು ಚಲಾಯಿಸಿದರು. ರೈಲು ನಿನ್ನೆ ಸರಿಯಾದ ಸಮಯಕ್ಕೆ ಸೊಲ್ಲಾಪುರ ನಿಲ್ದಾಣದಿಂದ ಹೊರಟು, ಆಗಮನದ ನಿಗದಿತ ಸಮಯಕ್ಕಿಂತ ಐದು ನಿಮಿಷಗಳ ಮೊದಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಅನ್ನು ತಲುಪಿದೆ.
ಸೆಂಟ್ರಲ್ ರೈಲ್ವೇ ಪ್ರಕಟಣೆಯ ಪ್ರಕಾರ, 450 - ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ಸುರೇಖಾ ಯಾದವ್ ಅವರನ್ನು CSMT ನ ಪ್ಲಾಟ್‌ಫಾರ್ಮ್ ಸಂಖ್ಯೆ 8 ರಲ್ಲಿ ಸನ್ಮಾನಿಸಲಾಯಿತು. ಸುರೇಖಾ ಯಾದವ್ ರೈಲು ಚಲಾಯಿಸಿರುವ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, "ವಂದೇ ಭಾರತ್ - ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್" ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
"ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಆಗುವ ಮೂಲಕ ಸುರೇಖಾ ಯಾದವ್ ಕೇಂದ್ರ ರೈಲ್ವೆಯ ಕ್ಯಾಪ್‌ನಲ್ಲಿ ಮತ್ತೊಂದು ಗರಿಯನ್ನು ಮೂಡಿಸಿದ್ದಾರೆ" ಎಂದು ಕೇಂದ್ರ ರೈಲ್ವೆ ಹೇಳಿದೆ. ಸುರೇಖಾ ಯಾದವ್ ಅವರು ಈಗ ಮುಂಬೈ- ಪುಣೆ - ಸೋಲಾಪುರ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಚಲಾಯಿಸುತ್ತಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 2019ರಲ್ಲಿ ಪ್ರಾರಂಭಗೊಂಡಿದ್ದು, ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನವದೆಹಲಿ - ಕಾನ್ಪುರ - ಅಲಹಾಬಾದ್ - ವಾರಾಣಸಿ ಮಾರ್ಗದಲ್ಲಿ ಚಲಾಯಿಸಲಾಯಿತು. ಕಳೆದ ಫೆಬ್ರುವರಿಯಲ್ಲಿ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT)- ಸೊಲ್ಲಾಪುರದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪತಾಕೆ ಹಾರಿಸಿದ್ದರು.