ಸೂರತ್(ಗುಜರಾತ್):ಎರಡು ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕ ರೋಹಿತ್ ಪ್ರತಾಪ್ ಸಿಂಗ್ ಎಂಬಾತನ ಪ್ರಕರಣದ ಪೊಲೀಸ್ ತನಿಖೆ ನಡೆದಿದ್ದು, ಇದೀಗ ಮಹತ್ವದ ಮಾಹಿತಿ ಹೊರಬಿದ್ದಿದೆ.
ಗುಜರಾತ್ನ ಸೂರತ್ನ ಉದ್ನಾ ಪ್ರದೇಶದ ಪಟೇಲ್ನಗರದಲ್ಲಿ 24 ವರ್ಷದ ರೋಹಿತ್ ಪ್ರತಾಪ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದೆ. ಮೃತ ಯುವಕನ ಪತ್ನಿ ಸೋನಂ ಹಾಗೂ ಆಕೆಯ ಸಹೋದರ ಮುಖ್ತಾರ್ ಸೇರಿಕೊಂಡು ರೋಹಿತ್ಗೆ ಗೋಮಾಂಸ ತಿನ್ನಿಸಿರುವ ಕಾರಣ ಮನನೊಂದು ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ರೋಹಿತ್ ಮೂಲತಃ ಉತ್ತರ ಪ್ರದೇಶದ ನಿವಾಸಿ. ಸೂರತ್ನ ಉದ್ನಾ ಪ್ರದೇಶದ ಪಟೇಲ್ ನಗರದಲ್ಲಿ ವಾಸವಾಗಿದ್ದನು. ಈತ ಜೂ.27ರಂದು ಮಧ್ಯಾಹ್ನ 2.30ಕ್ಕೆ ಮನೆಯಲ್ಲಿರುವ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದ. ಆರಂಭದಲ್ಲಿ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂಬ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಜೊತೆಗೆ ತನಿಖೆಯನ್ನೂ ಕೈಗೊಂಡಿದ್ದರು. ಆದರೆ, ಮದುವೆಯಾಗಿ ಕೇವಲ ಆರು ತಿಂಗಳಾಗಿದ್ದರಿಂದ ಪೊಲೀಸರಿಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿದ್ದವು.
ಇದನ್ನೂ ಓದಿ:ನೀವು ಗೋಮಾಂಸ ತಿಂತೀರಿ ಅಂತಾ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ?: ಪ್ರತಾಪ್ ಸಿಂಹ
ರೋಹಿತ್ ವಾಸವಾಗಿದ್ದ ಪ್ರದೇಶದಲ್ಲಿ ಸೋನಂ ಕೂಡಾ ವಾಸವಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿ ತದನಂತರ ದೈಹಿಕ ಸಂಬಂಧ ಬೆಳೆದಿತ್ತು. ಹೀಗಾಗಿ, ಮದುವೆ ಮಾಡಿಕೊಂಡಿದ್ದರು. ರೋಹಿತ್ ಹಿಂದೂ ಆಗಿದ್ದು, ಸೋನಂ ಮುಸ್ಲಿಂ ಯುವತಿಯಾಗಿದ್ದಾಳೆ.
ಫೇಸ್ಬುಕ್ನಲ್ಲಿ ಸೊಸೈಡ್ ನೋಟ್ ಪೋಸ್ಟ್:ರೋಹಿತ್ ನೇಣು ಬಿಗಿದುಕೊಳ್ಳುವುದಕ್ಕೂ ಮುಂಚಿತವಾಗಿ ಸೊಸೈಡ್ ನೋಟ್ ಬರೆದಿಟ್ಟಿದ್ದನು. ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದಾನೆ. ಸ್ನೇಹಿತನ ಮೂಲಕ ಅದು ಎರಡು ತಿಂಗಳ ನಂತರ ರೋಹಿತ್ ಸಹೋದರನಿಗೆ ಗೊತ್ತಾಗಿದೆ. ಇದಾದ ಬಳಿಕ ಸೋನಂ ಹಾಗೂ ಸಹೋದರ ಮುಖ್ತಾರ್ ಜಾಕಿರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸೊಸೈಡ್ ನೋಟ್ನಲ್ಲಿ ಏನಿದೆ?:ನಾನು ಇಹಲೋಕ ತ್ಯಜಿಸುತ್ತಿದ್ದೇನೆ. ನನ್ನ ಸಾವಿಗೆ ಪತ್ನಿ ಸೋನಂ ಹಾಗೂ ಆಕೆಯ ಸಹೋದರ ಮುಖ್ತಾರ್ ಅಲಿ ಕಾರಣ. ಸ್ನೇಹಿತರೇ ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ನಿಮ್ಮೆಲ್ಲರಲ್ಲೂ ವಿನಂತಿಸುತ್ತೇನೆ. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ, ಗೋಮಾಂಸ ತಿನ್ನಿಸಿದ್ದಾರೆ. ನಾನು ಜೀವಂತವಾಗಿರಲು ಅರ್ಹನಲ್ಲ. ಹೀಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ರೋಹಿತ್ ಬರೆದಿದ್ದಾನೆ.
ರೋಹಿತ್ ಸಾವಿನ ಬಗ್ಗೆ ಕುಟುಂಬಕ್ಕೆ ತಿಳಿಸದ ಸೋನಂ:ರೋಹಿತ್ ಸಿಂಗ್ ಅವರ ತಾಯಿ ವೀಣಾದೇವಿ ತಿಳಿಸಿರುವ ಮಾಹಿತಿ ಪ್ರಕಾರ, ಸಾವಿನ ಬಗ್ಗೆ ನಮಗೆ ಸೋನಂ ಯಾವುದೇ ಮಾಹಿತಿ ನೀಡಿಲ್ಲ. ಅಂತ್ಯಕ್ರಿಯೆಯನ್ನು ಅವರೇ ಮಾಡಿದ್ದಾರೆ. ಎರಡು ತಿಂಗಳ ನಂತರ ಆತ್ಮಹತ್ಯೆ ಬಗ್ಗೆ ನಮಗೆ ಆತನ ಸ್ನೇಹಿತರಿಂದ ತಿಳಿದಿದೆ. ಸೋನಂ ಜೊತೆ ಆತ ವಾಸ ಮಾಡಲು ಪ್ರಾರಂಭಿಸಿದಾಗಿನಿಂದಲೂ ನಮ್ಮೊಂದಿಗೆ ಮಾತನಾಡಿರಲಿಲ್ಲ ಎಂದು ತಿಳಿಸಿದ್ದಾರೆ.