ಸೂರತ್(ಗುಜರಾತ್):ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕ್ರಿಮಿನಲ್ ಮಾನಹಾನಿ ಪ್ರಕರಣವೊಂದರಲ್ಲಿ ಗುಜರಾತ್ನ ಸೂರತ್ ಜಿಲ್ಲಾ ನ್ಯಾಯಾಲಯ 2 ವರ್ಷ ಸಜೆ ವಿಧಿಸಿದೆ. ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿತ್ತು. ಇಂದು ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ರಾಹುಲ್‌ಗೆ ಪ್ರಕರಣದಲ್ಲಿ ಜಾಮೀನು ಕೂಡ ಮಂಜೂರು ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:2019 ರ ಲೋಕಸಭೆ ಚುನಾವಣೆಯ ವೇಳೆ ಕರ್ನಾಟಕದ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪನಾಮೆ ವಿಚಾರವಾಗಿ ರಾಹುಲ್ ಗಾಂಧಿ ವಿವಾದಿತ ಹೇಳಿಕೆ ನೀಡಿದ್ದರು. ಈ ಸಂಬಂಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬುವವರು ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರಿದ್ದ ಪೀಠ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿತ್ತು.
ನ್ಯಾಯಾಲಯವು ಈ ಪ್ರಕರಣದ ತೀರ್ಪು ನೀಡಲು ಇಂದು(ಮಾರ್ಚ್ 23ಕ್ಕೆ) ದಿನಾಂಕವನ್ನು ನಿಗದಿಪಡಿಸಿತ್ತು. ಅದರಂತೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಿರುದ್ಧದ ಕೇಸ್ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ನ್ಯಾಯಮೂರ್ತಿ ಎಚ್.ಎಚ್.ವರ್ಮಾ ಅವರು ಪ್ರಕರಣ ತೀರ್ಪು ಪ್ರಕಟಿಸಿದ್ದು, ರಾಹುಲ್ ನೀಡಿದ ಹೇಳಿಕೆ ಇನ್ನೊಬ್ಬರ ಮಾನಹಾನಿ ಮಾಡಿದೆ. ಇದು ಕ್ರಿಮಿನಲ್ ಹೇಳಿಕೆಯಾಗಿದೆ ಎಂದ ಕೋರ್ಟ್, 2 ವರ್ಷ ಜೈಲು ಶಿಕ್ಷೆ ನೀಡಿತು.
ಈ ವರ್ಷದ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಮೇಲೆ ಹೇರಲಾಗಿದ್ದ ತಡೆಯಾಜ್ಞೆಯನ್ನು ಗುಜರಾತ್ ಹೈಕೋರ್ಟ್ ತೆರವು ಮಾಡಿತ್ತು. ಬಳಿಕ ವಿಚಾರಣೆ ನಡೆಸಿದ ಸೂರತ್ ಜಿಲ್ಲಾ ಕೋರ್ಟ್ ಕಳೆದ ವಾರವಷ್ಟೇ ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಈ ಪ್ರಕರಣದ ಬಹುತೇಕ ಎಲ್ಲಾ ವಿಚಾರಣೆಯ ಸಂದರ್ಭದಲ್ಲೂ ರಾಹುಲ್ ಗಾಂಧಿ ಖುದ್ದು ತಾವೇ ಹಾಜರಿದ್ದರು.