ಸೂರತ್ (ಗುಜರಾತ್):ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋರಿದ್ದ ಅರ್ಜಿಯನ್ನು ಸೂರತ್ ನ್ಯಾಯಾಲಯ ಇಂದು ವಜಾಗೊಳಿಸಿದೆ. ಇದರಿಂದ ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆ ಮುಂದುವರಿಯಲಿದೆ.
ನ್ಯಾಯಾಲಯದಲ್ಲಿ ಏನೇನಾಯ್ತು?:ಸೂರತ್ನ ಕೆಳಹಂತದ ನ್ಯಾಯಾಲಯ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ವಿರುದ್ಧ ಕಾಂಗ್ರೆಸ್ ನಾಯಕ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಕೋರ್ಟ್ನಲ್ಲಿ ಉಭಯ ಪಕ್ಷಗಳ ವಕೀಲರು ವಾದ ಪ್ರತಿವಾದ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.
ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಒಂದೇ ಸಾಲಿನಲ್ಲಿ ತೀರ್ಪು ನೀಡಿದ ಕೋರ್ಟ್, ಮೇಲ್ಮನವಿಯನ್ನು ವಜಾ ಮಾಡಿತು. ಮಾಜಿ ಸಂಸದರಿಗೆ ನೀಡಲಾದ ಶಿಕ್ಷೆಯನ್ನು ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ತೀರ್ಪು ಪ್ರಕಟವಾಗುವ ವೇಳೆ ರಾಹುಲ್ ಗಾಂಧಿ ಮತ್ತು ಅವರ ಪರ ವಕೀಲರು ಕೂಡ ಕೋರ್ಟ್ನಲ್ಲಿ ಹಾಜರಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಜಾಮೀನು ಪಡೆದಿದ್ದು, ಬಂಧನದಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ.