ಸೂರತ್(ಗುಜರಾತ್):ಸುಮಾರು20 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ದೃಢವಾಗಿದೆ. ಹೀಗಾಗಿ, ಸೂರತ್ ನಗರದ ಎರಡು ಪ್ರಾಥಮಿಕ ಶಾಲೆಗಳು ಮತ್ತು ಕಾಲೇಜನ್ನು 2 ವಾರಗಳ ಕಾಲ ಮುಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆಶಿಶ್ ನಾಯಕ್ ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್-19 ಉಲ್ಬಣಗೊಂಡ ಪರಿಣಾಮ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಸರ್ಕಾರದ ಆದೇಶದ ಮೇರೆಗೆ 2021ರ ಫೆಬ್ರವರಿಯಲ್ಲಿ ಪುನಃ ತೆರೆಯಲಾಗಿತ್ತು. ಅಂದಿನಿಂದ ಈವರೆಗೆ ಸುಮಾರು 118 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಕೊರೊನಾ ಪತ್ತೆಯಾಗಿದೆ ಎಂದರು.
ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ಸಿ ಡಿ ಬಾರ್ಫಿವಾಲಾ ಕಾಲೇಜಿನ ಸುಮಾರು 10 ವಿದ್ಯಾರ್ಥಿಗಳಲ್ಲಿ ಕೊರೊನಾ ದೃಢವಾದ ನಂತರ ಕಾಲೇಜನ್ನು 14 ದಿನಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಾಥಮಿಕ ಶಾಲೆಯ ಆರು ವಿದ್ಯಾರ್ಥಿಗಳು ಮತ್ತು ಇನ್ನೊಂದು ಶಾಲೆಯ ನಾಲ್ಕು ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿರುವುದರಿಂದ ಎರಡೂ ಶಿಕ್ಷಣ ಸಂಸ್ಥೆಗಳನ್ನು ಸಹ 14 ದಿನಗಳವರೆಗೆ ಬಂದ್ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.