ನವದೆಹಲಿ:ಲಕ್ಷದ್ವೀಪದಲ್ಲಿ ಪ್ರಫುಲ್ ಪಟೇಲ್ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅನೇಕ ಆದೇಶಗಳನ್ನು ಜಾರಿಗೊಳಿಸುತ್ತಿದ್ದಾರೆ. ಇವುಗಳಲ್ಲಿ ಕೆಲವು ವಿವಾದ ಸೃಷ್ಟಿಸಿವೆ. ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಮೆನುವಿನಲ್ಲಿ ಮಾಂಸದ ಉತ್ಪನ್ನಗಳನ್ನು ತೆಗೆದುಹಾಕುವ ಮತ್ತು ಡೈರಿ ಫಾರ್ಮ್‌ಗಳನ್ನು ಮುಚ್ಚುವ ಆದೇಶವನ್ನು ಕೂಡಾ ಅವರು ಹೊರಡಿಸಿದ್ದು, ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠ, ಕೇಂದ್ರ ಸರ್ಕಾರ, ಲಕ್ಷದ್ವೀಪ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದೆ. ಇದೇ ವೇಳೆ, ಜೂನ್ 22, 2021ರಂದು ಕೇರಳ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಹೇಳಿದೆ.
ಪ್ರಫುಲ್ ಪಟೇಲ್ ಅವರು ಲಕ್ಷದ್ವೀಪ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪಶು ಸಂಗೋಪನಾ ಇಲಾಖೆ ನಡೆಸುತ್ತಿದ್ದ ಫಾರ್ಮ್‌ಗಳನ್ನು ಮುಚ್ಚಲು ಆದ್ಯತೆ ನೀಡಿದ್ದಾರೆ ಎಂದು ಆರೋಪಿಸಿ ಕವರಟ್ಟಿ ಮೂಲದ ಅಜ್ಮಲ್ ಅಹ್ಮದ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಡೈರಿ ಫಾರ್ಮ್‌ಗಳನ್ನು ತಕ್ಷಣವೇ ಮುಚ್ಚುವಂತೆ ಸೂಚಿಸಲಾಗಿದೆ. ಹಸುಗಳು, ಕರುಗಳು ಮತ್ತು ಎತ್ತುಗಳ ಹತ್ಯೆಯನ್ನು ನಿಷೇಧಿಸುವ ಕಾನೂನನ್ನು ತರಲು ಲಕ್ಷದ್ವೀಪ ಆಡಳಿತ ಮುಂದಾಗುತ್ತಿದೆ. ಗುಜರಾತ್ ಮೂಲದ ಹಾಲಿನ ಉತ್ಪನ್ನಗಳನ್ನು ಖರೀದಿಸಲು ಒತ್ತಾಯಿಸಲಾಗುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಲಕ್ಷದ್ವೀಪದಲ್ಲಿ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಮೆನುವಿನಿಂದ ಕೋಳಿ ಮತ್ತು ಇತರ ಮಾಂಸದ ಪದಾರ್ಥಗಳನ್ನು ತೆಗೆದುಹಾಕುವ ಲಕ್ಷದ್ವೀಪ ಸರ್ಕಾರದ ನಿರ್ಧಾರವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಇದು ಇಲ್ಲಿನ ಸ್ಥಳೀಯ ನಿವಾಸಿಗಳ ಆಹಾರ ಪದ್ಧತಿಯ ಮೇಲಿನ ದಾಳಿ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನೂ ಓದಿ:ಹುಟ್ಟೂರಾದ ಪಂಚೂರಿಗೆ ಭೇಟಿ ನೀಡಲಿರುವ ಯೋಗಿ ಆದಿತ್ಯನಾಥ್: ತಾಯಿ, ತಂಗಿ ಜೊತೆ ಮಾತುಕತೆ