ಕರ್ನಾಟಕ

karnataka

ETV Bharat / bharat

ಸಿಎಂ ಏಕನಾಥ್​ ಶಿಂಧೆ, 16 ಶಿವಸೇನೆ ಬಂಡಾಯ ಶಾಸಕರ ಅನರ್ಹತೆ ಅರ್ಜಿ ವಾರದೊಳಗೆ ವಿಚಾರಣೆ ನಡೆಸಿ: ಮಹಾರಾಷ್ಟ್ರ ಸ್ಪೀಕರ್​ಗೆ ಸುಪ್ರೀಂ ಸೂಚನೆ - ಸಿಎಂ ಏಕನಾಥ್​ ಶಿಂಧೆ

ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಮತ್ತು 16 ಶಾಸಕರ ಅನರ್ಹತೆ ಅರ್ಜಿಯನ್ನು ಎರಡು ವಾರದಲ್ಲಿ ಇತ್ಯರ್ಥಪಡಿಸಿ ಎಂದು ಸುಪ್ರೀಂಕೋರ್ಟ್​ ಸ್ಪೀಕರ್​ಗೆ ಸೂಚಿಸಿದೆ.

ಶಿವಸೇನೆ ಬಂಡಾಯ ಶಾಸಕರ ಅನರ್ಹತೆ ಅರ್ಜಿ
ಶಿವಸೇನೆ ಬಂಡಾಯ ಶಾಸಕರ ಅನರ್ಹತೆ ಅರ್ಜಿ

By ETV Bharat Karnataka Team

Published : Sep 18, 2023, 8:45 PM IST

ನವದೆಹಲಿ:ಶಿವಸೇನೆಯಿಂದ ಬಂಡೆದ್ದಿರುವ ಮಹಾರಾಷ್ಟ್ರದ ಈಗಿನ ಸಿಎಂ ಏಕನಾಥ್​ ಶಿಂಧೆ ಮತ್ತು ಅವರ ಬಣದ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿಯನ್ನು ಒಂದು ವಾರದೊಳಗೆ ಕೈಗೆತ್ತಿಕೊಂಡು ವಿಚಾರಣೆ ನಡೆಸಿ, ಎರಡು ವಾರದೊಳಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್​ ಸ್ಪೀಕರ್​ಗೆ ಸೂಚಿಸಿದೆ.

ಶಿವಸೇನೆ ಬಂಡಾಯ ಶಾಸಕರ ಅನರ್ಹತೆ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ಸಿಎಂ ಏಕನಾಥ್​ ಶಿಂಧೆ ಮತ್ತವರ ಬಣದ ಕುರಿತ ವಿಚಾರಣೆಗೆ 4 ತಿಂಗಳ ಹಿಂದೆಯೇ ಆದೇಶಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಲಾಗಿದ್ದರೂ ವಿಚಾರಣೆ ನಡೆಸದೇ ಬಿಡಲಾಗಿದೆ. ಅದನ್ನು ಮುಂದಿನ ವಾರವೇ ಕೈಗೆತ್ತಿಕೊಳ್ಳಬೇಕು. ಎರಡು ವಾರಗಳ ನಂತರ ಏನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೋರ್ಟ್​ಗೆ ತಿಳಿಸಬೇಕು. ಇದು ಅನಿರ್ದಿಷ್ಟವಾಗಿ ಮುಂದುವರಿಯಲು ಬಿಡಬಾರದು ಎಂದು ಸ್ಪೀಕರ್​ ರಾಹುಲ್​ ನಾರ್ವೇಕರ್​ಗೆ ಹೇಳಿತು.

ಮಹಾರಾಷ್ಟ್ರದಲ್ಲಿ ಅಕ್ರಮ ಸರ್ಕಾರವಿದೆ:ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪ್ರಕರಣ ಕುರಿತಂತೆ ಮೇ 15, ಮೇ 23 ಮತ್ತು ಜೂನ್ 2 ರಂದು ಮೂರು ಬಾರಿ ಸ್ಪೀಕರ್​ಗೆ ಮನವಿ ಮಾಡಲಾಗಿದೆ. ಆದರೆ, ಸ್ಪೀಕರ್‌ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಉದ್ಧವ್​ ಠಾಕ್ರೆ ಬಣದಿಂದ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಯಿತು. ಜುಲೈ 14 ರಂದು ಸುಪ್ರೀಂ ಕೋರ್ಟ್ ಸ್ಪೀಕರ್​ಗೆ ನೋಟಿಸ್ ನೀಡಿತು. ಇಷ್ಟಾದರೂ ಇಲ್ಲಿಯವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಮಹಾರಾಷ್ಟ್ರದಲ್ಲಿ ಅಕ್ರಮ ಸರ್ಕಾರ ಜಾರಿಯಲ್ಲಿದೆ. ಇದು ಗಂಭೀರವಾದ ವಿಷಯ ಎಂದು ಹೇಳಿದರು.

ಸ್ಪೀಕರ್ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಬಲ್ ಅವರ ಆಕ್ಷೇಪಣೆಗಳನ್ನು ಅಲ್ಲಗಳೆದರು. ಅನರ್ಹತೆ ಅರ್ಜಿಯ ಕುರಿತಾಗಿ ಸ್ಪೀಕರ್​ ನಾರ್ವೇಕರ್​ ಅವರು 2 ದಿನಗಳ 1500 ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಯಾವುದೇ ಕ್ರಮವಾಗಿಲ್ಲ ಎಂಬುದು ಸಾಂವಿಧಾನಿಕ ಹುದ್ದೆಗೆ (ಸ್ಪೀಕರ್​) ಮಾಡಿದ ಅವಮಾನವಾಗಿದೆ ಎಂದು ವಾದಿಸಿದರು.

ಮಧ್ಯಪ್ರದೇಶಿಸಿದ ಕೋರ್ಟ್​, ಹಾಗಿದ್ದರೆ ಸ್ಪೀಕರ್​ಗೆ ಯಾವುದಾದ್ರೂ ಕ್ರಮ ಕೈಗೊಂಡಿದ್ದಾರಾ ಎಂದು ಪ್ರಶ್ನಿಸಿತು. ಸ್ಪೀಕರ್ ಸಾಂವಿಧಾನಿಕ ಕಾರ್ಯಕಾರಿ ಹುದ್ದೆ. ಅವರ ಜವಾಬ್ದಾರಿಯನ್ನು ಮರೆಯಬಾರದು ಎಂದು ಹೇಳಿತು.

ಕೋರ್ಟ್​ ಸ್ಪೀಕರ್​ಗೆ ಹೇಳಿದ್ದೇನು?:ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ಸಿಎಂ ಏಕನಾಥ್ ಶಿಂಧೆ ಸೇರಿದಂತೆ 16 ಶಿವಸೇನೆ ಶಾಸಕರ ಭವಿಷ್ಯವನ್ನು ನಿರ್ಧರಿಸುವಂತೆ ಮೇ 11ರಂದು ಸುಪ್ರೀಂ ಕೋರ್ಟ್ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸೂಚಿಸಿತ್ತು.

ಇದನ್ನೂ ಓದಿ:ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್​ ನೀರು ಬಿಡಲು ಸಿಡಬ್ಲ್ಯುಎಂಎ ಆದೇಶ.. ರಾಜ್ಯಕ್ಕೆ ಮತ್ತೆ ಸಂಕಷ್ಟ

ABOUT THE AUTHOR

...view details