ನವದೆಹಲಿ:ನಕಲಿ ನೋಟು, ಕಪ್ಪು ಹಣ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲ ಹಾಗು ತೆರಿಗೆ ವಂಚನೆಗಳನ್ನೆಲ್ಲ ತಡೆಯಲು ಕೇಂದ್ರ ಸರ್ಕಾರ 2016ರಲ್ಲಿ 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಐತಿಹಾಸಿಕ ಕ್ರಮವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ, ಇಂದು ಮಹತ್ವದ ಆದೇಶ ಪ್ರಕಟಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸಿಂಧುವಾಗಿದೆ ಎಂದು ಅತ್ಯುನ್ನತ ನ್ಯಾಯಾಲಯ ಹೇಳಿದೆ.
ಅಪನಗದೀಕರಣ ಕಾನೂನು ಮತ್ತು ಸಾಂವಿಧಾನಿಕ ದೋಷಗಳಿಂದ ಕೂಡಿದೆ ಎಂದು ಆರೋಪಿಸಿ ಸಲ್ಲಿಸಲಾದ 58 ಅರ್ಜಿಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎ.ನಜೀರ್ ಅವರ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಎಲ್ಲ ಅರ್ಜಿಗಳನ್ನೂ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಏನಿದೆ?:ನೋಟು ಅಮಾನ್ಯೀಕರಣ ನಿರ್ಧಾರವು ಯಾವುದೇ ಕಾನೂನು ಅಥವಾ ಸಾಂವಿಧಾನಿಕ ದೋಷಗಳಿಂದ ಕೂಡಿಲ್ಲ. ನಗದು ಅಕ್ರಮ ಸಂಗ್ರಹಣೆಯಿಂದ ದೇಶದ ಆರ್ಥಿಕ ನೀತಿಯ ಮೇಲೆ ಬೀರುವ ಪರಿಣಾಮಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಅಪನಗದೀಕರಣ ಘೋಷಿಸುವ ಮುನ್ನ 6 ತಿಂಗಳು ಮೊದಲೇ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮತ್ತು ಆರ್ಥಿಕ ತಜ್ಞರ ಜೊತೆ ಚರ್ಚೆ ನಡೆಸಿದೆ.
ಆರ್ಬಿಐ ಮತ್ತು ತಜ್ಞರ ಸಲಹೆಯ ಆಧಾರದ ಮೇಲೆಯೇ ಅಪನಗದೀಕರಣ ಘೋಷಿಸಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಕೇಂದ್ರ ಸರ್ಕಾರ ತಜ್ಞರ ಸಲಹೆಯಂತೆ ಈ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ ಎಂದು ಹೇಳಿದೆ.
ಇದೊಂದು ದೇಶದ ದೊಡ್ಡ ಆರ್ಥಿಕ ನೀತಿಯಾಗಿರುವುದರಿಂದ ಈ ನಿರ್ಧಾರವನ್ನು ಹಿಂಪಡೆಯಲು ಬರುವುದಿಲ್ಲ. ಕೇಂದ್ರ ಸರ್ಕಾರ ದೋಷಪೂರಿತವಾಗಿ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ನಿಲುವಿನಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ನ್ಯಾ.ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರು ತೀರ್ಪನ್ನು ಓದಿದರು.
ಪೀಠದಲ್ಲಿದ್ದ ನ್ಯಾಯಮೂರ್ತಿಗಳು:ಕರ್ನಾಟಕದ ಮೂಡಬಿದರೆ ಮೂಲದವರಾದ ನ್ಯಾಯಮೂರ್ತಿ ಎಸ್.ಎ.ನಜೀರ್ ಅವರು ಐವರು ಸದಸ್ಯರ ಸಾಂವಿಧಾನಿಕ ಪೀಠದ ಅಧ್ಯಕ್ಷತೆ ವಹಿಸಿದ್ದರೆ, ಇದರಲ್ಲಿ ನ್ಯಾ.ಬಿ.ಆರ್.ಗವಾಯಿ, ನ್ಯಾ.ಬಿ.ವಿ.ನಾಗರತ್ನ, ನ್ಯಾ.ಎ.ಎಸ್.ಬೋಪಣ್ಣ ಮತ್ತು ನ್ಯಾ.ವಿ.ರಾಮಸುಬ್ರಮಣಿಯನ್ ಇದ್ದರು. ನಾಡಿದ್ದು, ಅಂದರೆ ಜ.4 ರಂದು ನ್ಯಾ.ನಜೀರ್ ಅವರು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.