ನವದೆಹಲಿ : ಕೊರೊನಾ ನಿರ್ವಹಣೆ ಕುರಿತಾಗಿ ದಾಖಲಿಸಿಕೊಂಡಿದ್ದು ಸ್ವಯಂ ಪ್ರೇರಿತ ದೂರಿನ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಆರಂಭಗೊಂಡಿದೆ.
ಭಾರತದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ವೈದ್ಯಕೀಯ ವ್ಯವಸ್ಥೆಗಳಲ್ಲಿ ಕೊರತೆ ಕೂಡ ಎದ್ದು ಕಾಣಿಸುತ್ತಿದೆ. ಆಕ್ಸಿಜನ್ ಸೇರಿದಂತೆ ಪ್ರಮುಖ ವೈದ್ಯಕೀಯ ಪರಿಕರಗಳು ಹಾಗೂ ಔಷಧಿಗಳಲ್ಲಿ ಕೊರತೆ ಕಂಡು ಬಂದಿದೆ.
ಈ ಸಂಬಂಧ ಸರ್ವೋಚ್ಛ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠ ಹರೀಶ್ ಸಾಳ್ವೆ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿತ್ತು.
ಕೊರೊನಾ ನಿರ್ವಹಣೆ ವಿಚಾರದ ಬಗ್ಗೆ ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಿದೆ. ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಬಹುಮುಖ್ಯವಾಗಿ ಆಕ್ಸಿಜನ್ ಪೂರೈಕೆ, ಅಗತ್ಯ ಔಷಧೀಯ ಉತ್ಪನ್ನಗಳ ಪೂರೈಕೆ, ಕೊರೊನಾ ಲಸಿಕೆ ವಿತರಣೆ ಹಾಗೂ ಲಾಕ್ಡೌನ್ ಮಾಡುವ ಅಧಿಕಾರದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಮಿಕಸ್ ಕ್ಯೂರಿ ಹಾಗೂ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಆಲಿಸಲಾಗುತ್ತಿದೆ.
ವಿಚಾರಣೆ ನಡೆಸುತ್ತಿರುವ ನ್ಯಾ.ಡಿ.ವೈ.ಚಂದ್ರಚೂಡ ಹಾಗೂ ನ್ಯಾ.ಎಸ್.ರವೀಂದ್ರ ಭಟ್ ನೇತೃತ್ವದ ನ್ಯಾಯಪೀಠ, ಜನರ ಜೀವವನ್ನು ನಾವು ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ. ನಾವು ಕೋವಿಡ್ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದೇವೆ. ಉನ್ನತ ಮಟ್ಟದಲ್ಲಿ ಈ ವಿಚಾರದ ನಿರ್ವಹಣೆಯಾಗುತ್ತಿದೆ ಎಂದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ಬಿಕ್ಕಟ್ಟನ್ನು ಎದುರಿಸಲು ನಿಮ್ಮ ರಾಷ್ಟ್ರೀಯ ಯೋಜನೆ ಏನು? ಇದಕ್ಕೆ ವ್ಯಾಕ್ಸಿನೇಷನ್ ಮಾತ್ರವೇ ಪ್ರಮುಖ ಆಯ್ಕೆಯಾಗಿದೆಯೇ? ತುಷಾರ್ ಮೆಹ್ತಾಗೆ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಪ್ರಶ್ನಿಸಿದ್ದಾರೆ