ನವದೆಹಲಿ: ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ತಡೆಯುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತ ಸಂಘಟನೆ ನೇತೃತ್ವದಲ್ಲಿ ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ರೈಲು ಮಾರ್ಗ, ರಸ್ತೆ ಮಾರ್ಗಗಳನ್ನು ನಿರ್ಬಂಧಿಸಿ ಹಲವು ಬಾರಿ ಧರಣಿ ನಡೆಸಿದ್ದಾರೆ. ಇದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ರೈಲು-ರಸ್ತೆ ಮಾರ್ಗಗಳಿಗೆ ಅಡ್ಡವಾಗಿ ಕುಳಿತಿರುವ ಪ್ರತಿಭಟನಾ ರೈತರು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸಿ.ಟಿ.ರವಿಕುಮಾರ್ ಅವರ ನೇತೃತ್ವದ ನ್ಯಾಯಪೀಠವು, ಸಂಯುಕ್ತ ಕಿಸಾನ್ ಮೋರ್ಚಾಗೆ ರಸ್ತೆ ತಡೆಯುವ ಹಕ್ಕು ಇದೆಯೇ ಎಂದು ಪ್ರಶ್ನಿಸಿದೆ. ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ತಡೆಯುವ ಹಕ್ಕಿಲ್ಲ ಹೇಳಿದೆ.