ನವದೆಹಲಿ: ಮಣಿಪುರದ ಹಿಂಸಾಚಾರ ಕುರಿತು ಮಂಗಳವಾರವೂ ಆಡಳಿತ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸುಪ್ರೀಂ ಕೋರ್ಟ್ ಕಟುವಾದ ಟೀಕೆಗಳನ್ನು ಮುಂದುವರಿಸಿದೆ. ಮೇ ಆರಂಭದಿಂದ ಜುಲೈ ಅಂತ್ಯದವರೆಗೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ಯಂತ್ರಗಳ ಸಂಪೂರ್ಣ ಸ್ಥಗಿತವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಈಶಾನ್ಯ ರಾಜ್ಯ ಮಣಿಪುರ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದೆ. ಕಾನೂನಿಗೆ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಅವರಿಗೆ ಏನು ಉಳಿದಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ. ಇತ್ತೀಚೆಗೆ ವೈರಲ್ ವಿಡಿಯೋದಲ್ಲಿ ಸಂತ್ರಸ್ತರನ್ನು ಜನರ ಗುಂಪಿಗೆ ಹಸ್ತಾಂತರಿಸಿದ ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದೂ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಪ್ರಶ್ನಿಸಿದೆ. ಇದೇ ವೇಳೆ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ 11 ಎಫ್‌ಐಆರ್‌ಗಳನ್ನು ಸಿಬಿಐಗೆ ವರ್ಗಾಯಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಪೊಲೀಸರು ತನಿಖೆ ನಡೆಸಲು ಅಸಮರ್ಥರು - ಸುಪ್ರೀಂ: ಸಿಜೆ ಡಿವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಮಣಿಪುರದ ಹಿಂಸಾಚಾರ ಕುರಿತು ವಿಚಾರಣೆ ನಡೆಸಿತು. ಮೇ ಮತ್ತು ಜುಲೈ ನಡುವೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಯಂತ್ರದ ಸಂಪೂರ್ಣ ಸ್ಥಗಿತವಾಗಿದೆ. ಮಣಿಪುರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಉಳಿದಿಲ್ಲ. ರಾಜ್ಯ ಪೊಲೀಸರು ತನಿಖೆ ನಡೆಸಲು ಅಸಮರ್ಥರಾಗಿದ್ದಾರೆ ಮತ್ತು ಅವರು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ತರಾಟೆ ತೆಗೆದುಕೊಂಡರು.
ಇದನ್ನೂ ಓದಿ:Manipur violence: ಮಣಿಪುರ ಮಹಿಳೆಯರ ಅವಮಾನಿಸಿದ ಘಟನೆ ಕ್ಷಮಿಸಲಾಗದ ತಪ್ಪು: ಸುಪ್ರೀಂ ಕೋರ್ಟ್