ನವದೆಹಲಿ:ಮಹಿಳಾ ವೈದ್ಯೆಯ ಖಾಸಗಿ ಕ್ಷಣಗಳ ಚಿತ್ರಗಳನ್ನು ಕ್ಲಿಕ್ಕಿಸಿದ ಆರೋಪದ ಮೇಲೆ ವಜಾಗೊಂಡಿರುವ ಬಿಎಸ್ಎಫ್ ಯೋಧನಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ಯೋಧನ ಮೇಲೆ ಮಾಡಲಾದ ಆರೋಪಗಳಿಗೆ ಬಲವಾದ ಯಾವುದೇ ಸಾಕ್ಷಿಗಳಿಲ್ಲ. ಅವರನ್ನು ವಜಾ ಮಾಡಿದ ಕ್ರಮ ಸರಿಯಲ್ಲ. ವಜಾಗೊಂಡ ದಿನದಿಂದ ಅವರ ಸಂಬಳದಲ್ಲಿ ಅರ್ಧದಷ್ಟನ್ನು ಪಾವತಿಸಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ಗಡಿ ಭದ್ರತಾ ಪಡೆಯ(ಬಿಎಸ್ಎಫ್) ಸಿಬ್ಬಂದಿಯಾದ ಜೋಗೇಶ್ವರ್ ಸ್ವೈನ್ ಮೇಲೆ 2005 ರಲ್ಲಿ ವೈದ್ಯೆಯೊಬ್ಬರು ಸ್ನಾನ ಮಾಡುತ್ತಿರುವ ವೇಳೆ ಚಿತ್ರಗಳನ್ನು ತೆಗೆದ ಆರೋಪ ಹೊರಿಸಲಾಗಿದೆ. ವಿಚಾರಣೆ ನಡೆಸಿದ ಸಮಗ್ರ ಭದ್ರತಾ ಪಡೆ ನ್ಯಾಯಾಲಯ(ಎಸ್ಎಸ್ಎಫ್ಸಿ) ಜೋಗೇಶ್ವರ್ ಮೇಲೆ ಕೇಸ್ ದಾಖಲಿಸಿ ಕೆಲಸದಿಂದ ವಜಾ ಮಾಡಿತ್ತು. ಇದರ ವಿರುದ್ಧ ಆರೋಪಿತ ವ್ಯಕ್ತಿ ಹಲವು ಕೋರ್ಟ್ಗಳಲ್ಲಿ ಸವಾಲು ಹಾಕಿದ್ದ.
ಈ ಹಿಂದೆಯೂ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಾಗಲೂ ಆರೋಪಿಯ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಸಿಕ್ಕ ಕ್ಯಾಮೆರಾ ಆತನದ್ದೇ ಮತ್ತು ಅವರೇ ಚಿತ್ರಗಳನ್ನು ತೆಗೆದಿದ್ದಾರೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಆರೋಪಿಯ ವಿರುದ್ಧ ನಡೆದ ತನಿಖೆ ತಪ್ಪಾಗಿದೆ. ಕೆಲಸದಿಂದ ವಜಾ ಮಾಡಿದ್ದೂ ತಪ್ಪು. ಆತನಿಗಿದ್ದ ಸಂಬಳದಲ್ಲಿ ಅರ್ಧದಷ್ಟನ್ನು ವಜಾಗೊಂಡ ದಿನಗಳವರೆಗೆ ನೀಡಬೇಕು ಎಂದು ತೀರ್ಪು ನೀಡಿತ್ತು.
ಆದರೆ, ಇದರ ವಿರುದ್ಧ ಬಿಎಸ್ಎಫ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ಕೋರ್ಟ್, ದೆಹಲಿ ಕೋರ್ಟ್ ನೀಡಿದ ಆದೇಶವನ್ನು ಎತ್ತಿಹಿಡಿದಿದೆ. ಚಿತ್ರ ತೆಗೆದಿದ್ದು ಆತನೇ, ಕ್ಯಾಮೆರಾ ಕೂಡ ಆತನದ್ದೇ ಎಂಬುದು ಪ್ರಕರಣದಲ್ಲಿ ಸಾಬೀತಾಗಿಲ್ಲ. ಹೀಗಾಗಿ ಕೆಲಸದಿಂದ ವಜಾಗೊಂಡ ಸಿಬ್ಬಂದಿ ಪರಿಹಾರಕ್ಕೆ ಅರ್ಹರು ಎಂದು ಹೇಳಿದೆ.
ವೈದ್ಯೆಯ ಆರೋಪವೇನು?:ತಾನು ಸ್ನಾನ ಮಾಡುತ್ತಿದ್ದಾಗ ಕಿಟಕಿಯ ಹೊರಗೆ ಕ್ಯಾಮೆರಾದಿಂದ ಚಿತ್ರ ಕ್ಲಿಕ್ಕಿಸಿದ್ದರು. ತಕ್ಷಣವೇ ನಾನು ಕಿರುಚಿಕೊಂಡೆ. ನನ್ನ ತಾಯಿ ಹೊರಹೋಗಿ ನೋಡಿದ್ದರು. ಆದರೆ, ಅಲ್ಲಿ ಯಾರೂ ಇರಲಿಲ್ಲ. ಯೋಧನಾಗಿದ್ದ ಜೋಗೇಶ್ವರ್ನದ್ದೇ ಕೃತ್ಯ ಎಂದು ಅವರು ಆರೋಪಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಸಮಗ್ರ ಭದ್ರತಾ ಪಡೆ ಕೋರ್ಟ್ (ಎಸ್ಎಸ್ಎಫ್ಸಿ) ಯೋಧ ಜೋಗೇಶ್ವರ್ ತಾನು ತಪ್ಪು ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಅವರ ಹೇಳಿಕೆಯ ಮೇಲೆ ಆತನನ್ನು ದೋಷಿ ಎಂದು ಪರಿಗಣಿಸಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಕೋರ್ಟ್ನಲ್ಲಿ ವಾದ ಮಂಡಿಸಿತ್ತು. ಆದರೆ, ಯೋಧ ತಾನು ತಪ್ಪು ಮಾಡಿದ್ದೇನೆ ಎಂಬ ಹೇಳಿಕೆಗೆ ಅವರ ಸಹಿ ಪಡೆದಿರಲಿಲ್ಲ. ಹೀಗಾಗಿ ಇದು ಆತನದ್ದೇ ಹೇಳಿಕೆ ಎನ್ನಲು ಸಾಕ್ಷ್ಯವೇನು ಎಂದು ಕೋರ್ಟ್ ಪ್ರಶ್ನಿಸಿತ್ತು.
ಇದನ್ನೂ ಓದಿ:Bank Of Baroda: ದೇಶಾದ್ಯಂತ 6 ಸಾವಿರಕ್ಕೂ ಹೆಚ್ಚು ಎಟಿಎಂಗಳಲ್ಲಿ ಯುಪಿಐ ಸೌಲಭ್ಯ