ನವ ದೆಹಲಿ: 2018ರ ಡಿಸೆಂಬರ್ 12ರಂದು ನಡೆದ ಕೊಲಿಜಿಯಂ ಸಭೆಯ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‌ಟಿಐ) ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತು.
ಕೊಲಿಜಿಯಂನ ಎಲ್ಲಾ ಸದಸ್ಯರು ಸೇರಿ ರಚಿಸಿದ ಮತ್ತು ಸಹಿ ಮಾಡಿದ ನಿರ್ಣಯಗಳನ್ನು ಮಾತ್ರ ಅಂತಿಮ ನಿರ್ಧಾರ ಎಂದು ಹೇಳಬಹುದು. ಸದಸ್ಯರ ನಡುವೆ ಚರ್ಚೆ ಮತ್ತು ಸಮಾಲೋಚನೆಯ ಮೇಲೆ ರಚಿಸಲಾದ ತಾತ್ಕಾಲಿಕ ನಿರ್ಣಯಗಳು ಅವರೆಲ್ಲರೂ ಸಹಿ ಮಾಡದ ಹೊರತು ಅಂತಿಮವೆಂದು ಹೇಳಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಸಿ.ಟಿ. ರವಿಕುಮಾರ್ ಅವರ ಪೀಠ ಹೇಳಿದೆ.
ಕೊಲಿಜಿಯಂ ಬಹು-ಸದಸ್ಯ ಸಂಸ್ಥೆಯಾಗಿದೆ. ಅದರ ತಾತ್ಕಾಲಿಕ ನಿರ್ಧಾರವನ್ನು ಸಾರ್ವಜನಿಕ ವೇದಿಕೆಗೆ ತರಲು ಸಾಧ್ಯವಿಲ್ಲ. ಮಾಧ್ಯಮ ವರದಿಗಳು ಮತ್ತು ಕೊಲಿಜಿಯಂನ ಮಾಜಿ ಸದಸ್ಯರ ಸಂದರ್ಶನದ ಮೇಲೆ ತಾನು ಅವಲಂಬಿತನಾಗಲು ಸಾಧ್ಯವಿಲ್ಲ ಮತ್ತು ಮಾಜಿ ನ್ಯಾಯಾಧೀಶರು ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಕೋರ್ಟ್ ಹೇಳಿದೆ.