ನವದೆಹಲಿ: ಕಿರುಕುಳ ಪ್ರಕರಣದ ಆರೋಪಿಗೆ ಮಧ್ಯಪ್ರದೇಶದ ಹೈಕೋರ್ಟ್ ನೀಡಿದ್ದ ಷರತ್ತನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ಜಾಮೀನು ಬೇಕೆಂದರೆ ಸಂತ್ರಸ್ತೆಗೆ ರಾಖಿ ಕಟ್ಟಬೇಕೆಂದ ಅಧೀನ ನ್ಯಾಯಾಲಯ!
ತನ್ನ ಹೆಂಡತಿಯೊಂದಿಗೆ ದೂರುದಾರರ ಮನೆಗೆ ಭೇಟಿ ನೀಡಬೇಕು. ಹಾಗೆಯೇ ಆಕೆಗೆ ರಾಖಿ ಕಟ್ಟಬೇಕು ಎಂದು ಆರೋಪಿಗೆ ಷರತ್ತು ವಿಧಿಸಲಾಗಿತ್ತು. ಈ ಷರತ್ತನ್ನು ಈಗ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಜುಲೈ 30, 2020 ರಂದು ಹೈಕೋರ್ಟ್ ಹೊರಡಿಸಿದ ಆದೇಶದಲ್ಲಿ, ಲೈಂಗಿಕ ಕಿರುಕುಳದ ಸಂಬಂಧ ಆರೋಪಿಗೆ ಜಾಮೀನು ನೀಡಬೇಕಾದರೆ, ಆತ ತನ್ನ ಹೆಂಡತಿಯೊಂದಿಗೆ ದೂರುದಾರರ ಮನೆಗೆ ಭೇಟಿ ನೀಡಬೇಕು. ಹಾಗೆಯೇ ಆಕೆಗೆ ರಾಖಿ ಕಟ್ಟಬೇಕು ಎಂದು ಸೂಚಿಸಿತ್ತು. ಮುಂಬರುವ ಎಲ್ಲ ಸಮಯದಲ್ಲೂ ಆಕೆಯನ್ನು ರಕ್ಷಣೆ ಮಾಡುವ ಸಂಬಂಧ ಶಪಥ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಈ ಆದೇಶ ಪ್ರಶ್ನಿಸಿ ಒಂಭತ್ತು ಮಹಿಳಾ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ದೂರುದಾರ ಮಹಿಳೆಯು ಅನುಭವಿಸಿದ್ದ ನೋವನ್ನು ತೀರಾ ಕ್ಷುಲ್ಲಕವೆಂಬಂತೆ ಕೆಳ ನ್ಯಾಯಾಲಯ ನೋಡಿದೆ ಎಂದು ವಾದ ಮಾಡಲಾಗಿತ್ತು. ಇದಕ್ಕೆ ಧ್ವನಿಯಾದ ಪೀಠ, ನ್ಯಾಯಾಧೀಶರು ಮತ್ತು ವಕೀಲರು ಸಂವೇದನಾಶೀಲತೆ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ನಿರ್ದೇಶನ ನೀಡಿದೆ.