ನವದೆಹಲಿ:ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ತಜ್ಞರ ಸಮಿತಿ ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ವಕೀಲ ವಿಶಾಲ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದು, 2 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಪಘಾತದ ಕಾರಣಗಳನ್ನು ಗುರುತಿಸಲಾಗಿದೆ. ರೈಲ್ವೆ ಇಲಾಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಹೇಳಿಕೆ ನೀಡಿದ್ದು, ಇತ್ತ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸದಂತೆ ತಡೆಯಲು ಗುಣಮಟ್ಟದ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಾರ್ವಜನಿಕ ಪ್ರಯಾಣದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರೈಲ್ವೇಯಲ್ಲಿ 'ಕವಚ್ ಪ್ರೊಟೆಕ್ಷನ್ ಸಿಸ್ಟಮ್' ಎಂಬ ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ವ್ಯವಸ್ಥೆಯ ಅನುಷ್ಠಾನಕ್ಕೆ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ನೀಡಬೇಕು ಎಂದು ಪಿಐಎಲ್ ಕೋರಿದೆ.
ಏನಿದು ಕವಚ್ ಯೋಜನೆ?:ಕವಚ್ ಎಂಬುದು ಭಾರತೀಯ ರೈಲ್ವೆಯ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆ. ಈ ವ್ಯವಸ್ಥೆಯ ಮೂಲಕ ರೈಲು ಅಪಘಾತಗಳನ್ನು ತಡೆಯಲು ರೈಲ್ವೆ ಯೋಜನೆ ರೂಪಿಸುತ್ತಿದೆ. ಇದು ಪ್ರಸ್ತುತ ಕೆಲವು ವಿಧಾನಗಳಲ್ಲಿ ಲಭ್ಯವಿದೆ. ಇದು ರೈಲ್ವೇ ಸಿಗ್ನಲ್ ವ್ಯವಸ್ಥೆಯೊಂದಿಗೆ ಹಳಿಗಳ ಮೇಲೆ ಓಡುವ ರೈಲುಗಳ ವೇಗವನ್ನು ನಿಯಂತ್ರಿಸುತ್ತದೆ. ಇದರಿಂದ ರೈಲು ಅಪಘಾತಗಳನ್ನು ಪರಿಶೀಲಿಸಬಹುದು. ಲೊಕೊ ಪೈಲಟ್ ಕೆಂಪು ಸಿಗ್ನಲ್ ಅನ್ನು ನಿರ್ಲಕ್ಷಿಸಿ ರೈಲು ಚಲಿಸಿದರೆ, ಸ್ವಯಂಚಾಲಿತವಾಗಿ ಬ್ರೇಕ್ ಹಾಕಲಾಗುತ್ತದೆ. ರೈಲು ಅಪಘಾತಗಳನ್ನು ತಡೆಯಲು ಈ ಕವಚ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿರುವುದಾಗಿ ರೈಲ್ವೆ ಸಚಿವಾಲಯ ಕೆಲವು ತಿಂಗಳ ಹಿಂದೆ ಘೋಷಿಸಿತ್ತು.