ನವದೆಹಲಿ: ಮಾರ್ಗದರ್ಶಿ ಸಂಸ್ಥೆಯ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸದಂತೆ ಆಂಧ್ರ ಪ್ರದೇಶ ಹೈಕೋರ್ಟ್‌ಗೆ ಇಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ಸುಪ್ರೀಂನಲ್ಲಿ ವಿಚಾರಣೆ ಮುಗಿಯುವವರೆಗೂ ಈ ಪ್ರಕರಣಗಳ ವಿಚಾರಣೆ ಕೈಗೊಳ್ಳಬಾರದು ಎಂದು ಕೋರ್ಟ್ ಆದೇಶಿಸಿದೆ. ಇದೇ ವೇಳೆ, ಆಂಧ್ರ ಪ್ರದೇಶ ಸರ್ಕಾರ, ಸಿಐಡಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಸಲ್ಲಿಸಲು ತಾಕೀತು ಮಾಡಿತು. ಮುಂದಿನ ವಿಚಾರಣೆಯನ್ನು 2024ರ ಫೆಬ್ರವರಿ 2ಕ್ಕೆ ಮುಂದೂಡಲಾಗಿದೆ.
ಮಾರ್ಗದರ್ಶಿ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ತೆಲಂಗಾಣ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಮಾರ್ಗದರ್ಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ಮಾರ್ಗದರ್ಶಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಕೆಲವು ತೆಲಂಗಾಣ ಹೈಕೋರ್ಟ್‌ನಲ್ಲಿ ತನಿಖೆ ನಡೆಯುತ್ತಿದ್ದು, ಇನ್ನು ಕೆಲವು ಪ್ರಕರಣಗಳ ವಿಚಾರಣೆ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪೀಠ, ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೈಕೋರ್ಟ್ ಹೇಳುತ್ತಿರುವಾಗ ಮಧ್ಯಪ್ರವೇಶ ಮಾಡುವುದು ಹೇಗೆ ಎಂದು ಪ್ರಶ್ನಿಸಿತು. ಆಗ ಲೂತ್ರಾ, ಹೈದರಾಬಾದ್‌ನಲ್ಲಿ ಘಟನೆ ನಡೆದಿರುವುದು ಇದಕ್ಕೆ ಕಾರಣ ಎಂದು ವಿವರಿಸಿದರು. ಅಲ್ಲದೇ, ಪ್ರಕರಣವೊಂದರ ತನಿಖೆಯನ್ನು ತೆಲಂಗಾಣ ಹೈಕೋರ್ಟ್‌ಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶ ನೀಡಿರುವುದನ್ನು ಪೀಠದ ಗಮನಕ್ಕೆ ತಂದು, ಇದರ ನಂತರ ಅನೇಕ ಪ್ರಕರಣಗಳು ದಾಖಲಾಗಿವೆ ಮತ್ತು ತನಿಖೆಗಾಗಿ ಆಂಧ್ರ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.