ನವದೆಹಲಿ: ಸಂಸದರ ಮತ್ತು ಶಾಸಕರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಸಂಬಂಧಪಟ್ಟ ಹೈಕೋರ್ಟ್ನ ಅನುಮತಿ ಇಲ್ಲದೇ ಯಾವುದೇ ಕಾರಣಕ್ಕೆ ಹಿಂತೆಗೆದುಕೊಳ್ಳಬಾರದೆಂದು ಸುಪ್ರೀಂಕೋರ್ಟ್ ಹೇಳಿದೆ.
ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಯನ್ನು ಕೋರಿ ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿನೀತ್ ಸರನ್ ಅವರ ತ್ರಿಸದಸ್ಯ ಪೀಠವು ಈ ರೀತಿ ಆದೇಶ ನೀಡಿದೆ. ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ಈ ಸಲಹೆ ನೀಡಿದ್ದರು.
ಸೆಪ್ಟೆಂಬರ್ 16, 2020ರಿಂದ ಹಿಂಪಡೆದಿರುವ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್ಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಬೇಕಾಗಿ ಎಲ್ಲಾ ಹೈಕೋರ್ಟ್ಗಳಿಗೆ ಸೂಚಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಕೇರಳ ಸರ್ಕಾರ ಮತ್ತು ಕೆ.ಅಜಿತ್ ಎಂಬುವರ ನಡುವಿನ ಪ್ರಕರಣದಲ್ಲಿ ಸುಪ್ರೀಂ ತೀರ್ಪನ್ನು ಉಲ್ಲೇಖಿಸಿದೆ.
ಜೊತೆಗೆ ಸಂಸದರು ಮತ್ತು ಶಾಸಕರ ವಿರುದ್ಧ ಇರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು, ಬಾಕಿಯಿರುವ ಪ್ರಕರಣಗಳು, ಪೂರ್ಣಗೊಂಡಿರುವ ವಿಚಾರಣೆಗಳ ಬಗ್ಗೆ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗೆ ಸೂಚನೆ ನೀಡಿದೆ.
ಇದನ್ನೂ ಓದಿ:ಚಿತ್ರೀಕರಣಕ್ಕೆ ಅನುಮತಿ ಪಡೆಯುವ ನಿಯಮಗಳಲ್ಲಿ ಬದಲಾವಣೆ ತರುತ್ತೇವೆ: ಸಿಎಂ ಬೊಮ್ಮಾಯಿ