ನವದೆಹಲಿ:ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿ ಬಳಿಯ ಅತಿಕ್ರಮಣ ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಂದಿನ 10 ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಇಂದು (ಬುಧವಾರ) ಆದೇಶಿಸಿದೆ.
ನ್ಯಾಯಮೂರ್ತಿ ಅನಿರುದ್ಧ ಬೋಸ್, ನ್ಯಾ. ಸಂಜಯ್ ಕುಮಾರ್ ಮತ್ತು ನ್ಯಾ.ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ಪೀಠವು, "ಕೃಷ್ಣ ಜನ್ಮಭೂಮಿ ಬಳಿಯ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹತ್ತು ದಿನಗಳ ಅವಧಿಗೆ ಯಥಾಸ್ಥಿತಿ ಇರಲಿ. ಒಂದು ವಾರದ ನಂತರ ವಿಚಾರಣೆಗೆ ಪಟ್ಟಿ ಮಾಡಿ'' ಎಂದು ಹೇಳಿತು. ಇದೇ ವೇಳೆ, ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ನೊಟೀಸ್ ಜಾರಿ ಮಾಡಿದೆ.
ಮಥುರಾ ಮತ್ತು ವೃಂದಾವನ ನಡುವಿನ ಸಂಪರ್ಕವನ್ನು ಸುಗಮಗೊಳಿಸಲು ಅಸ್ತಿತ್ವದಲ್ಲಿರುವ ಮೀಟರ್ ಗೇಜ್ ರೈಲ್ವೆ ಹಳಿಯನ್ನು ಬ್ರಾಡ್ ಗೇಜ್ ಟ್ರ್ಯಾಕ್‌ಗೆ ಪರಿವರ್ತಿಸುವ ಪ್ರಯತ್ನಗಳ ಭಾಗವಾಗಿ ರೈಲ್ವೆ ಇಲಾಖೆಯು ದೇವಾಲಯದ ಸಂಕೀರ್ಣದ ಹಿಂದಿನ ಅತಿಕ್ರಮಣಗಳನ್ನು ತೆರವುಗೊಳಿಸುತ್ತಿದೆ.