ನವದೆಹಲಿ: ನ್ಯಾಯಾಂಗ ನಿಂದನೆಯ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಗಳು ಅತಿರೇಕವಾಗಿ ವರ್ತಿಸಬಾರದು ಅಥವಾ ಭಾವಾವೇಶಕ್ಕೆ ಒಳಗಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಂಗ ನಿಂದನೆ ಮಾಡಿದ್ದಕ್ಕಾಗಿ ವೈದ್ಯರೊಬ್ಬರ ಪರವಾನಿಗೆಯನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಾಗ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಲಯಗಳಿಗೆ ನೀಡಲಾಗಿರುವ ನ್ಯಾಯಾಂಗ ನಿಂದನೆಯ ನ್ಯಾಯವ್ಯಾಪ್ತಿಯು ಅಸ್ತಿತ್ವದಲ್ಲಿರುವ ಸಮಗ್ರ ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿಹಿಡಿಯುವ ಉದ್ದೇಶಕ್ಕಾಗಿ ಮಾತ್ರವಾಗಿದೆ ಎಂದು ನ್ಯಾಯಾಲಯವು ಮತ್ತೆ ಮತ್ತೆ ಪ್ರತಿಪಾದಿಸಿದೆ. "ಈ ಅಧಿಕಾರವನ್ನು ಚಲಾಯಿಸುವಾಗ ನ್ಯಾಯಾಲಯಗಳು ಅತಿರೇಕಕ್ಕೆ ಹೋಗಬಾರದು ಅಥವಾ ಭಾವಾವೇಶಕ್ಕೆ ಒಳಗಾಗಬಾರದು, ಇಂಥ ಪ್ರಕರಣಗಳಲ್ಲಿ ವಿವೇಚನೆಯಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ದಂಡಿಸುವ ಕ್ರಮವಾಗಿ ವೈದ್ಯರ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗದು ಎಂದು ಪೀಠ ತಿಳಿಸಿದೆ.
ವೈದ್ಯರ ಮೇಲಿರುವ ನ್ಯಾಯಾಂಗ ನಿಂದನೆ ಆರೋಪವು ಆ ವೈದ್ಯರ ವೃತ್ತಿಪರ ದುರ್ನಡತೆಯಿಂದ ಉಂಟಾಗಿರಬಹುದು, ಆದರೆ ಇದು ಆರೋಪಿಯ ಅವಹೇಳನಕಾರಿ ನಡವಳಿಕೆಯ ತೀವ್ರತೆ/ಸ್ವಭಾವದ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಅಂಥ ಅಪರಾಧಗಳು ಪರಸ್ಪರ ಪ್ರತ್ಯೇಕವಾಗಿರುತ್ತವೆ ಮತ್ತು ವಿಭಿನ್ನವಾಗಿರುತ್ತವೆ. ಮೊದಲನೆಯದು ನ್ಯಾಯಾಲಯದ ನಿಂದನೆ ಕಾಯಿದೆ, 1971 ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಎರಡನೆಯದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯಿದೆ, 2019 ರ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆ ಎಂದು ಪೀಠ ಹೇಳಿದೆ.
ಅನಧಿಕೃತವಾಗಿ ನಿರ್ಮಿಸಲಾದ ಕಟ್ಟಡವನ್ನು ತೆರವುಗೊಳಿದ ಕಾರಣದಿಂದ ವೈದ್ಯರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದರ ಭಾಗವಾಗಿ ಏಕಸದಸ್ಯ ಪೀಠವು ವೈದ್ಯರ ಲೈಸೆನ್ಸ್ ಅನ್ನು ಅಮಾನತುಗೊಳಿಸಿತ್ತು. ವೈದ್ಯರು ಕೇವಲ 250 ಮಿಲಿಮೀಟರ್ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಅಧಿಕೃತವಾಗಿ ಕಟ್ಟಲಾದ ಕಟ್ಟಡದ ಭಾಗಕ್ಕೆ ಅಪಾಯವಾಗಬಹುದು ಎಂಬ ಕಾರಣದಿಂದ ಆ 250 ಮಿಲಿಮೀಟರ್ ಭಾಗವನ್ನು ಕೆಡವದೆ ಬಿಡಲಾಗಿದೆ ಎಂಬ ವಿಷಯವನ್ನು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಂಡಿತು.
ಉಳಿದಿರುವ ಅನಧಿಕೃತ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಅಸ್ತಿತ್ವದಲ್ಲಿರುವ ಕಟ್ಟಡದ ಸದೃಢತೆಯನ್ನು ಕಾಪಾಡಲು ಪರಿಹಾರಾತ್ಮಕ ನಿರ್ಮಾಣ ಮತ್ತು ಅದರ ನಂತರ ನಿರ್ದಿಷ್ಟ ಸಮಯದೊಳಗೆ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸುವ ಬಗ್ಗೆ ಸಂಬಂಧಿತ ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತು.
ನ್ಯಾಯಾಂಗ ನಿಂದನೆ ಎಂದರೇನು?: ನ್ಯಾಯಾಂಗ ನಿಂದನೆಯು ನ್ಯಾಯಾಲಯದ ಕಡೆಗೆ ಅಗೌರವ ಅಥವಾ ಅವಿಧೇಯತೆ ಅಥವಾ ಅದರ ಕ್ರಮಬದ್ಧ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಾಗಿದೆ. ಉದಾಹರಣೆಗೆ- ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸುವುದು, ಸಾಕ್ಷ್ಯವನ್ನು ಪಡೆಯುವ ಪ್ರಯತ್ನಗಳಲ್ಲಿ ಹಸ್ತಕ್ಷೇಪ ಮಾಡುವುದು, ಸಾಕ್ಷ್ಯ ನಾಶಪಡಿಸುವುದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವುದು ಮತ್ತು ಸಾಕ್ಷಿಗಳನ್ನು ಬೆದರಿಸುವುದು ಸೇರಿವೆ. ನ್ಯಾಯಾಲಯದ ಬಗ್ಗೆ ಸಾರ್ವಜನಿಕವಾಗಿ ಅಗೌರವ ತೋರಿಸುವುದು ಒಳಗೊಂಡಂತೆ ನ್ಯಾಯಾಲಯದ ಕೊಠಡಿಯಲ್ಲಿ ಮತ್ತು ಅದರ ಹೊರಗಿನ ನಡವಳಿಕೆಗಳು ಸಹ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಓದಿ :ITR filingಗೆ ನಾಳೆಯೇ ಕೊನೆಯ ದಿನ; ನೀವಿನ್ನೂ ಫೈಲ್ ಮಾಡಿಲ್ವಾ?