ನವದೆಹಲಿ: ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ದೇಶದ್ರೋಹ ಕಾನೂನು ಅಗತ್ಯವಿದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಸೆಕ್ಷನ್ 124 ಎ ರದ್ದುಗೊಳಿಸುವಂತೆ ಕೋರಿ ನಿವೃತ್ತ ಮೇಜರ್ ಜನರಲ್ ಎಸ್.ಜಿ ವೊಂಬಟ್‌ಕೆರೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಇಂತಹ ಪ್ರಶ್ನೆ ಮುಂದಿಟ್ಟಿದೆ.
ದೇಶದ್ರೋಹ ಕಾನೂನು ಬ್ರಿಟನ್‌ನಿಂದ ವಲಸೆ ಬಂದ ಕಾನೂನು ಎಂದು ಉಲ್ಲೇಖಿಸಿರುವ ನ್ಯಾಯಪೀಠ, ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಬಿಳಿಯರು ಇಂತಹ ಕಾನೂನು ತಂದಿದ್ದಾರೆ. ಮಹಾತ್ಮ ಗಾಂಧಿ, ತಿಲಕ್ ವಿರುದ್ಧ ದೇಶದ್ರೋಹ ಕಾನೂನನ್ನು ಬಳಸಲಾಗಿದೆ ಎಂದು ಸಿಜೆಐ ನೆನಪಿಸಿದರು.
ಇದನ್ನೂ ಓದಿ: ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಆರೋಪಿಗಳಿಗೆ ಜಾಮೀನು; ಮಧ್ಯ ಪ್ರವೇಶಿಸಲ್ಲ ಎಂದು NIAಗೆ ಸುಪ್ರೀಂಕೋರ್ಟ್ ಸ್ಪಷ್ಟನೆ
ಪ್ರಸ್ತುತ ದೇಶದಲ್ಲಿ ದೇಶದ್ರೋಹದ ಅಡಿಯಲ್ಲಿ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ? ಎಷ್ಟು ಪ್ರಕರಣಗಳು ಬಾಕಿ ಇವೆ? ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಕೇಳಿದೆ. ದೇಶದ್ರೋಹ ಕಾನೂನಿನ ದುರುಪಯೋಗದ ಬಗ್ಗೆ ಕೇಂದ್ರ ಏಕೆ ಯೋಚಿಸಲಿಲ್ಲ ಎಂದು ಸಿಜೆಐ ಎನ್.ವಿ.ರಮಣ ಪ್ರಶ್ನಿಸಿದರು.
ಪೋಕರ್ ಆಟಗಾರರ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ಸಹ ದಾಖಲಿಸುತ್ತಿದ್ದಾರೆ. ಜಾಮೀನು ಸಿಗದಂತೆ ಮಾಡಲು ದ್ವೇಷದಿಂದಾಗಿ ಈ ಕಾನೂನನ್ನು ಬಳಸಲಾಗುತ್ತಿದೆ. ಅಧಿಕಾರದ ದಾಹ ಹೊಂದಿರುವ ಸರ್ಕಾರಗಳು ಸೆಡಿಷನ್ ಕಾನೂನು ಮೂಲಕ ಬೆದರಿಕೆ ಹಾಕುತ್ತಿವೆ ಎಂದು ವ್ಯಾಖ್ಯಾನಿಸಿದ್ದಾರೆ.