ನವದೆಹಲಿ:ಈಗಿನ ಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ ಕಳೆದ ವರ್ಷ (2022) ಶಿವಸೇನೆಯಿಂದ ಬಂಡೆದ್ದು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿರುವ 38 ಶಾಸಕರ ಅನರ್ಹತೆಯನ್ನು ಡಿಸೆಂಬರ್ 31ರೊಳಗೆ ಇತ್ಯರ್ಥ ಮಾಡಬೇಕು. ಜೂನ್ನಲ್ಲಿ ಎನ್ಸಿಪಿಯಿಂದ ಬಂಡೆದ್ದ ಡಿಸಿಎಂ ಅಜಿತ್ ಪವಾರ್ ಸೇರಿದಂತೆ 9 ಎನ್‌ಸಿಪಿ ಶಾಸಕರ ಅನರ್ಹತೆಯ ಕುರಿತು 2024 ರ ಜನವರಿ 31ರೊಳಗೆ ಅಂತಿಮ ತೀರ್ಪು ನೀಡಬೇಕು ಎಂದು ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಅಂತಿಮ ಗಡುವು ವಿಧಿಸಿದೆ.
ಶಿವಸೇನೆಯ ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣಗಳ ಶಾಸಕರು ಪರಸ್ಪರ ಅನರ್ಹತೆಗೆ ಅರ್ಜಿ ಸಲ್ಲಿಸಿದ್ದವು. ಇದು ವರ್ಷದಿಂದ ಹಾಗೆಯೇ ಉಳಿದುಕೊಂಡಿದೆ. ಸ್ಪೀಕರ್ ವಿಳಂಬ ಧೋರಣೆ ವಿರುದ್ಧ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಈ ಹಿಂದೆ ಹಲವು ಗಡುವು ನೀಡಿತ್ತು. ಆದರೆ, ಮಹಾರಾಷ್ಟ್ರ ಸ್ಪೀಕರ್ ಯಾವುದೇ ನಿರ್ಧಾರಕ್ಕೆ ಬಾರದ ಕಾರಣ ಇದೀಗ ಅಂತಿಮ ಗಡುವು ನೀಡಿದೆ.
ಸಂವಿಧಾನದ 10ನೇ ಶೆಡ್ಯೂಲ್ ಪಾವಿತ್ರ್ಯತೆ ಉಳಿಸಿ:ಇಂದಿನವಿಚಾರಣೆಯಲ್ಲಿ, ಪಕ್ಷಾಂತರ ವಿರೋಧದ ಬಗ್ಗೆ ವಿವರಿಸುವ ಸಂವಿಧಾನದ 10ನೇ ಶೆಡ್ಯೂಲ್ ಅನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಶಾಸಕರ ಪಕ್ಷಾಂತರ ಸರಿಯೇ ಅಥವಾ ತಪ್ಪೇ ಎಂಬುದನ್ನು ಇತ್ಯರ್ಥ ಮಾಡಿ 10ನೇ ಶೆಡ್ಯೂಲ್ನ ಪಾವಿತ್ರ್ಯತೆಯನ್ನು ಕಾಪಾಡಬೇಕಿದೆ. ಅನರ್ಹತೆ ಅರ್ಜಿಗಳ ನಿರ್ಧಾರವನ್ನು ಇನ್ನಷ್ಟು ವಿಳಂಬ ಮಾಡುವ ಮೂಲಕ ಕಿತ್ತಾಟಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಹೇಳಿತು.
ಸಂವಿಧಾನದ 10ನೇ ಶೆಡ್ಯೂಲ್ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಂದ ಪಕ್ಷಾಂತರ ಮಾಡುವುದನ್ನು ತಡೆಯುವುದಾಗಿದೆ. ಅದರ ವಿರುದ್ಧ ಕಠಿಣ ಕ್ರಮಗಳನ್ನೂ ಇದು ಸೂಚಿಸುತ್ತದೆ.