ನವದೆಹಲಿ:ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪೆನ್ನಾರ್ ನದಿ ನೀರು ಬಳಕೆ ವಿವಾದ ಬಗೆಹರಿಸಲು ಇನ್ನು ಮೂರು ತಿಂಗಳೊಳಗೆ ನ್ಯಾಯಾಧೀಕರಣವನ್ನು ರಚಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪೆನ್ನಾರ್ ನದಿ ನೀರು ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಎರಡೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸುವ ಸಾಧ್ಯತೆ ಮಧ್ಯೆಯೇ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.
ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸುತ್ತಿದೆ. ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸುತ್ತಿರುವ ಕೋರ್ಟ್ ವಿವಾದ ಬಗೆಹರಿಸಲು ಕೇಂದ್ರದ ಮಧ್ಯಸ್ತಿಕೆಗೆ ಸೂಚಿಸಿದೆ.
ಏನಿದು ವಿವಾದ:ಕರ್ನಾಟಕವು ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕೋಲಾರ ಜಿಲ್ಲೆಯ ಯರಗೋಳ ಗ್ರಾಮದ ಬಳಿ ಅಣೆಕಟ್ಟು ನಿರ್ಮಾಣ ಮಾಡುತ್ತಿದೆ. 240 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಜಲಶಕ್ತಿ ಸಚಿವಾಲಯದಿಂದ ಅಗತ್ಯ ಅನುಮತಿ ಪಡೆದಿದೆ.
ಆದರೆ, ಇದಕ್ಕೆ ತಗಾದೆ ತೆಗೆದಿರುವ ತಮಿಳುನಾಡು, ಅಣೆಕಟ್ಟು ನಿರ್ಮಾಣದಿಂದ ನದಿಯ ನೈಸರ್ಗಿಕ ಹರಿವಿಗೆ ತಡೆಯುಂಟಾಗಲಿದೆ. ಇದು ರಾಜ್ಯದ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಮೇಲೆ ಪ್ರಭಾವ ಬೀರಲಿದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ತಕರಾರು ಅರ್ಜಿಯಲ್ಲಿ ಹೇಳಿದೆ.
ಈ ಹಿಂದಿನ ವಿಚಾರಣೆಯಲ್ಲಿ ನದಿ ನೀರು ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಕರ್ನಾಟಕ ವಾದ ಮಂಡಿಸಿತ್ತು. ಜಲಾಶಯ ನಿರ್ಮಾಣ ಅಂತಾರಾಜ್ಯ ಜಲವಿವಾದ ಕಾಯ್ದೆಯ ಉಲ್ಲಂಘನೆ ಎಂದು ತಮಿಳುನಾಡು ವಾದಿಸಿತ್ತು.
ಓದಿ:ಪಾಕಿಸ್ತಾನದಲ್ಲಿ ಜನಗಣತಿ: ಸಿಖ್ಖರ ಗುರುತಿಗೆ ಪ್ರತ್ಯೇಕ ಕಾಲಂ